ಅನಾಥಾಶ್ರಮಕ್ಕೆ ಜನಾರ್ದನ ಪೂಜಾರಿ ಭೇಟಿ; ಹಣ್ಣು ಹಂಪಲು ವಿತರಣೆ
ಸೋನಿಯಾ ಗಾಂಧಿ ಅವರ ಜನ್ಮದಿನ

ಮಂಗಳೂರು, ಡಿ.9: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜನ್ಮದಿನ ಅಂಗವಾಗಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರಿಂದ ವಿವಿಧ ಅನಾಥಾಶ್ರಮಗಳಿಗೆ ಹಣ್ಣು ಹಂಪಲು, ಬಿಸ್ಕೆಟ್ ವಿತರಣೆ ಕಾರ್ಯ ರವಿವಾರ ನಡೆಯಿತು.
ನಗರದ ಜೆಪ್ಪು ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸ್ ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಬಿ.ಜನಾರ್ದನ ಪೂಜಾರಿ ಮಾತನಾಡಿ, ನೀವು ದೇವರ ಮಕ್ಕಳು. ನಿಮ್ಮನ್ನು ನಿಮ್ಮ ಸ್ವಂತ ಕುಟುಂಬದ ಸದಸ್ಯರು ದೂರ ಮಾಡಿದ್ದರೂ, ಆಶ್ರಮದವರು ಪ್ರೀತಿ, ವಿಶ್ವಾಸದಿಂದ ಸಾಕಿ ಸಲಹುತ್ತಿದ್ದಾರೆ. ಇಂಥ ಸಂಸ್ಥೆಗಳು ಇಲ್ಲದಿರುತ್ತಿದ್ದರೆ, ಅನಾಥರು ರಸ್ತೆ ಬದಿ ಇರಬೇಕಾಗುತ್ತಿತ್ತು ಎಂದರು.
ಅನಾಥರ ಮೂಲಕ ದೇವರನ್ನು ಕಾಣುವ ಕೆಲಸ ಆಶ್ರಮದಲ್ಲಿ ನಡೆಯುತ್ತಿದೆ. ಇನ್ನೊಬ್ಬರಿಗಾಗಿ ಬದುಕನ್ನೇ ತ್ಯಾಗ ಮಾಡುವ ಆಶ್ರಮದ ಮುಖ್ಯಸ್ಥರಿಗಿಂತ ಮೇಲೆ ಬೇರೆ ಯಾರೂ ನನಗೆ ಕಾಣಿಸುತ್ತಿಲ್ಲ. ರಾಮ, ಏಸು, ಪೈಗಂಬರ್ ಇದನ್ನೇ ಸಾರಿದ್ದಾರೆ. ನಾನು ಪ್ರತಿದಿನ ಈ ಮೂವರನ್ನು ನೆನೆದೇ ಮಲಗುತ್ತೇನೆ. ಹಾಗೆ ಹೇಳಿದ ಕಾರಣಕ್ಕೆ ಯಾರಾದರೂ ನನ್ನನ್ನು ಸಾಯಿಸುತ್ತಾರೆ ಎಂಬುದಕ್ಕೆ ಅರ್ಥ ಇಲ್ಲ. ನನ್ನೊಬ್ಬನನ್ನು ಕೊಲ್ಲಬಹುದು. ಜಗತ್ತಿನ ಕೋಟ್ಯಂತರ ಜನರನ್ನು ಕೊಲ್ಲಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸ್ ಆಶ್ರಮದ ಅಧೀಕ್ಷಕಿ ಸಿಸ್ಟರ್ ಮಾರ್ಸೆಲಿನ್ ಅಧ್ಯಕ್ಷತೆ ವಹಿಸಿ, ಪ್ರತಿವರ್ಷ ಆಶ್ರಮಕ್ಕೆ ಹಣ್ಣು ಹಂಪಲು ಸಹಿತ ನೆರವು ನೀಡುತ್ತಿರುವ ಜನಾರ್ದನ ಪೂಜಾರಿ ಅವರಿಗೆ ಕೃತಜ್ಞತೆ ಸಲ್ಲಿಸಿ, ಹ್ಟುಟುಹಬ್ಬ ಆಚರಿಸುತ್ತಿರುವ ಸೋನಿಯಾ ಗಾಂಧಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಕಾಂಗ್ರೆಸ್ ಮುಖಂಡ ಕಳ್ಳಿಗೆ ತಾರನಾಥ ಶೆಟ್ಟಿ, ಕಾರ್ಪೊರೇಟರ್‌ಗಳಾದ ಅಪ್ಪಿ, ಜೆಸಿಂತಾ ವಿಜಯಾ ಆಲ್ಫ್ರೆಡ್, ಸಬಿತಾ ಮಿಸ್ಕಿತ್, ಶೈಲಜಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಆಶ್ರಮದ ಸಿಸ್ಟರ್ ತೂಲಿಯಾ ಸ್ವಾಗತಿಸಿದರು. ಸಿಸ್ಟರ್ ವೀಡಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಳಿಕ ಜೆಪ್ಪು ಸೈಂಟ್ ಅಂತೋನಿ ಆಶ್ರಮ, ಕೊಣಾಜೆಯ ಅಭಯ ಆಶ್ರಮ, ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಹಾಗೂ ಬಂದರ್‌ನ ಝೀನತ್ ಬಕ್ಷ್ ಯತೀಂ ಖಾನಾಕ್ಕೆ ತೆರಳಿದ ಪೂಜಾರಿ, ಹಣ್ಣು ಹಂಪಲು ವಿತರಿಸಿದರು.
ಪೂಜಾರಿಯನ್ನು ಕೊಂದರೆ ತೃಪ್ತಿ ಸಿಗುವುದಾದರೆ ಕೊಲ್ಲಲಿ: ಜನಾರ್ದನ ಪೂಜಾರಿ
ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ಈ ಹೇಳಿಕೆ ವಿರೋಧಿಸಿ ತನ್ನನ್ನು ಎನ್‌ಕೌಂಟರ್ ಮಾಡಿ ಸಾಯಿಸಬೇಕು ಎಂದು ವ್ಯಕ್ತಿ ಒಬ್ಬ ಹೇಳಿದ್ದಾನೆ. ಆತನಿಗೆ ಅದರಿಂದ ತೃಪ್ತಿ ಸಿಗುವುದಾದರೆ ನನ್ನನ್ನು ಕೊಲ್ಲಲ್ಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ವೃದ್ಧಾಶ್ರಮದಲ್ಲಿ ಸೋನಿಯಾ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಹಣ್ಣು-ಹಂಪಲು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಮನನ್ನು ನಂಬಿ ಎಂದು ಹಿಂದೂಗಳಿಗೆ, ಮುಹಮ್ಮದ್ ಪೈಗಂಬರ್ ಅವರನ್ನು ನಂಬಿ ಎಂದು ಮುಸ್ಲಿಮರಿಗೆ, ಏಸುವನ್ನು ನಂಬಿ ಎಂದು ಕ್ರಿಶ್ಚಿಯನ್‌ರಿಗೆ ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದರು. ನಾನು ರಾಮ ದೇವರನ್ನು, ಮುಹಮ್ಮದ್ ಪೈಗಂಬರ್ ಮತ್ತು ಏಸುವನ್ನು ದೇವರೆಂದು ನಂಬುತ್ತೇನೆ ಎಂದು ಹೇಳಿದರು.







