ಸಂಸ್ಕೃತಿ ಕೊರತೆಯಿಂದ ಹಿರಿಯರು ವೃದ್ಧಾಶ್ರಮಕ್ಕೆ: ಹಿರಿಯಡ್ಕ ಗೋಪಾಲ ರಾವ್

ಶಿರ್ವ, ಡಿ.9: ಇಂದಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳುವಳಿಕೆಯ ಕೊರತೆ ಇರುವುದೇ ವಯಸ್ಸಾದ ತಂದೆ ತಾಯಿಗಳು ವೃದ್ಧಾಶ್ರಮ ಸೇರಲು ಮೂಲ ಕಾರಣವಾಗಿದೆ ಎಂದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್ ಹೇಳಿದ್ದಾರೆ.
ಬಂಟಕಲ್ಲು ಶ್ರೀದುರ್ಗಾ ಚಂಡೆ ಬಳಗದ ವತಿಯಿಂದ ರವಿವಾರ ಆಯೋಜಿ ಸಲಾದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾ ಡುತ್ತಿದ್ದರು. ಮಹಿಳೆಯರು ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಅರಿತು, ಉತ್ತಮ ವೌಲ್ಯಗಳೊಂದಿಗೆ ಸುಸಂಸ್ಕೃತರಾದಾಗ ಮಾತ್ರ ಉತ್ತಮ ಕುಟುಂಬದ ರಚನೆಯಾಗುತ್ತದೆ. ಮಹಿಳೆಯರು ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡುವ ರಾಯಭಾರಿಗಳಾಗಬೇಕು ಎಂದರು.
ಪರ್ಕಳ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವಾಸು ಪ್ರಭು ನರ್ಜೆ ಮಾತನಾಡಿದರು. ತಾಪಂ ಸದಸ್ಯೆ ಸಂದ್ಯಾ ಕಾಮತ್, ಹಿರಿಯಡ್ಕ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ನೂಜಿ ಜನಾರ್ದನ ನಾಯಕ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಸದಸ್ಯ ಉಮೇಶ ಬೋರ್ಕಾರ್ ಉಪಸ್ಥಿತರಿದ್ದರು.
ಜಯಂತ ರಾವ್ ಹಿರಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿ ವಂದಿಸಿದರು. ಬಳಗದ ಸದಸ್ಯೆಯರಾದ ಕಲಾವತಿ ನಾಯಕ್, ಸಂಗೀತಾ ಕೆ.ಪಾಟ್ಕರ್, ಶಕುಂತಳ ಪ್ರಭು, ಸುನೀತಾ ಎಚ್.ನಾಯಕ್, ಗೋಪಾಲ ರಾವ್ ಪುತ್ರ ರಾಮಮೂರ್ತಿ ರಾವ್ ಹಾಜರಿದ್ದರು