ಮೋದಿ ಸರಕಾರದಲ್ಲಿ ಕೇಂದ್ರ ಸಂಪುಟ ‘ಅತಿ ದೊಡ್ಡ ಬಲಿಪಶು’: ಯಶವಂತ್ ಸಿನ್ಹಾ

ಕೋಲ್ಕತ್ತಾ, ಡಿ. 9: ಕೇಂದ್ರ ಸಂಪುಟ ಸಹಿತ ದೇಶದ ವಿವಿಧ ಸಂಸ್ಥೆಗಳನ್ನು ನರೇಂದ್ರ ಮೋದಿ ಸರಕಾರ ಧ್ವಂಸಗೊಳಿಸಿದೆ ಎಂದು ಬಿಜೆಪಿಯ ಮಾಜಿ ನಾಯಕ ಯಶ್ವಂತ್ ಸಿನ್ಹಾ ರವಿವಾರ ಆರೋಪಿಸಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ‘ಮಾದರಿ ಬಂಗಾಳ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಮುಖ ಮಸೂದೆಗಳನ್ನು ಅನುಮೋದನೆ ಮಾಡುವ ಸಂದರ್ಭ ಪ್ರಧಾನಿ ಅವರು ರಾಜ್ಯ ಸಭೆಯನ್ನು ಕಡೆಗಣಿಸಿದ್ದಾರೆ ಎಂದರು. ಮೋದಿ ಸರಕಾರ ದೇಶದ ವಿವಿಧ ಸಂಸ್ಥೆಗಳನ್ನು ಧ್ವಂಸಗೊಳಿಸಿದೆ. ಆದರೆ, ಇದರ ಅತಿ ದೊಡ್ಡ ಬಲಿಪಶು ಕೇಂದ್ರ ಸಂಪುಟ ಎಂದು ಅವರು ಹೇಳಿದರು. ರಫೇಲ್ ಯುದ್ಧ ವಿಮಾನ ಒಪ್ಪಂದವಾಗಲಿ ಅಥವಾ ನಗದು ನಿಷೇಧವಾಗಲಿ ಸಂಪುಟಕ್ಕೆ ಮಾಹಿತಿ ನೀಡದೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿನ್ಹಾ ಹೇಳಿದರು. ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಸಂದರ್ಭ ರಾಜ್ಯ ಸಭೆಯನ್ನು ಕಡೆಗಣಿಸಲು ಯತ್ನಿಸಿರುವುದರಿಂದ ಮೋದಿ ಸರಕಾರದ ಎರಡನೇ ಅತಿ ದೊಡ್ಡ ಬಲಿಪಶು ಸಂಸತ್ತು ಎಂದು ಅವರು ತಿಳಿಸಿದರು. ನಗದು ನಿಷೇಧ ‘ವಿಪತ್ತು’ ಎಂದು ವ್ಯಾಖ್ಯಾನಿಸಿದ ಅವರು, ತನ್ನ ಆರ್ಥಿಕ ನೀತಿಯ ವಿಫಲತೆ ಮುಚ್ಚಿ ಹಾಕಲು ಮೋದಿ ಸರಕಾರ ಆರ್ಥಿಕ ಬೆಳವಣಿಗೆಯ ಅಂಕಿ-ಅಂಶಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಮೊದಲು ಅವರು ಜಿಡಿಪಿ ಲೆಕ್ಕ ಮಾಡುವ ವಿಧಾನ ಬದಲಾಯಿಸಿದರು. ಪ್ರಸಕ್ತ ಆಡಳಿತಕ್ಕಿಂತ ಯುಪಿಎ ಸರಕಾರದ ಆರ್ಥಿಕ ನಿರ್ವಹಣೆಯೇ ಉತ್ತಮವಾಗಿತ್ತು ಎಂಬ ವರದಿ ಬಂದಾಗ ವೆಬ್‌ಸೈಟ್‌ನಿಂದ ಅಂಕಿ-ಅಂಶಗಳನ್ನೇ ತೆಗೆದು ಹಾಕಿದರು. ಅನಂತರ ಆರ್ಥಿಕತೆಯ ಆರೋಗ್ಯಯುತ ಚಿತ್ರಣ ನೀಡಲು ಅಂಕಿ-ಅಂಶವನ್ನೇ ಬದಲಾಯಿಸಿದರು ಎಂದು ಸಿನ್ಹಾ ಹೇಳಿದರು. ದೇಶದಲ್ಲಿ ನಡೆದ, ನಡೆಯುತ್ತಿರುವ ಎಲ್ಲ ತಪ್ಪುಗಳಿಗೆ ಈ ಹಿಂದಿನ ಸರಕಾರವನ್ನೇ ತೆಗಳುವ ಅಭ್ಯಾಸವನ್ನು ಮೋದಿ ಸರಕಾರ ರೂಢಿಸಿಕೊಂಡಿದೆ ಎಂದು ಯಶವಂತ್ ಸಿನ್ಹಾ ಹೇಳಿದರು.







