ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದರು: ಆರೆಸ್ಸೆಸ್ ನಾಯಕ ಭಯ್ಯಾಜಿ ಜೋಶಿ
ರಾಮ ಮಂದಿರ ನಿರ್ಮಾಣ ಆಗ್ರಹಿಸಿ ಬೃಹತ್ ರ್ಯಾಲಿ

ಹೊಸದಿಲ್ಲಿ, ಡಿ. 9: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತ್ವರಿತಗೊಳಿಸುವಂತೆ ಆಗ್ರಹಿಸಿ ಸಂಘಪರಿವಾರ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ರವಿವಾರ ಬೃಹತ್ ರ್ಯಾಲಿ ನಡೆಸಿತು. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ಆರೆಸ್ಸೆಸ್ ಸಹಿತ ರ್ಯಾಲಿಯಲ್ಲಿ ಪಾಲ್ಗೊಂಡ ಗುಂಪುಗಳು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಆಧ್ಯಾದೇಶ ಮುಂಜೂರು ಮಾಡುವಂತೆ ಅಥವಾ ಕಾನೂನು ಪ್ರಕ್ರಿಯೆಯನ್ನು ಬದಿಗೆ ತಳ್ಳಲು ಕಾರ್ಯಕಾರಿ ಆದೇಶ ಜಾರಿಗೊಳಿಸುವಂತೆ ಆಗ್ರಹಿಸಿದವು. ಬಿಜೆಪಿಯ ಹೆಸರು ಉಲ್ಲೇಖಿಸದೆ, ಆರೆಸ್ಸೆಸ್‌ನ ಹಿರಿಯ ಪದಾಧಿಕಾರಿ ಸುರೇಶ್ ಭಯ್ಯಾಜಿ ಜೋಷಿ ಬಿಜೆಪಿ ಹಾಗೂ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದರು. ‘‘ಇಂದು ಅಧಿಕಾರದಲ್ಲಿ ಇರುವವರು ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ಜನರ ಮಾತು ಕೇಳಬೇಕು ಹಾಗೂ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸುವ ಆಗ್ರಹವನ್ನು ಈಡೇರಿಸಬೇಕು. ಅವರಿಗೆ ಜನರ ಭಾವನೆಗಳ ಬಗ್ಗೆ ಅರಿವಿದೆ. ನಾವು ಭಿಕ್ಷೆ ಬೇಡುತ್ತಿಲ್ಲ. ನಾವು ನಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಿದ್ದೇವೆ. ದೇಶ ರಾಮ ರಾಜ್ಯವನ್ನು ಬಯಸುತ್ತಿದೆ’’ ಎಂದು ಅವರು ಹೇಳಿದರು. ರಾಮ ಮಂದಿರ ನಿರ್ಮಾಣ ಸುಗಮ ಮಾಡಲು ಸೂಕ್ತ ಮತ್ತು ಅಗತ್ಯವಾಗಿರುವ ಕಾನೂನು ತರಲು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಈ ಹಿಂದೆ ಧ್ವನಿ ಎತ್ತಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ಒಡೆತನದ ಮೊಕದ್ದಮೆ ವಿಚಾರಣೆ ಬಾಕಿ ಇದ್ದುದರಿಂದ ಹಾಗೂ ತ್ವರಿತ ವಿಚಾರಣೆಗೆ ನಿರಾಕರಿಸಿರುವುದರಿಂದ ಅನಂತರ ಅವರು ಆಧ್ಯಾದೇಶ ತರುವಂತೆ ಕರೆ ನೀಡಿದ್ದರು. ಅಯೋಧ್ಯೆ ವಿವಾದದ ಬಗ್ಗೆ ವಿಚಾರಣೆಯ ದಿನಾಂಕವನ್ನು ನ್ಯಾಯಾಧೀಶರು ಜನವರಿಯಲ್ಲಿ ಘೋಷಿಸುವ ಸಾಧ್ಯತೆ ಇದೆ. ಸಾವಿರಾರು ಜನರು ರಾಮಲೀಲಾ ಮೈದಾನಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಪರಿಣಾಮ ರವಿವಾರ ಐತಿಹಾಸಿಕ ಕೆಂಪು ಕೋಟೆಯ ಹೊರಗೆ ಆತಂಕದ ವಾತಾವರಣ ನಿರ್ಮಾಣ ಆಯಿತು.
ಕಾಲ್ತುಳಿತದ ಭೀತಿಯಿಂದ ಪೊಲೀಸರು ಮೈದಾನ ಪ್ರವೇಶಿಸುವ ಗೇಟ್ ಮುಚ್ಚಿದರು. ಬಲ ಪ್ರಯೋಗಿಸಿ ಗೇಟು ತೆರೆಯಲು ಜನಸಂದಣಿ ಪ್ರಯತ್ನಿಸಿತು. ಆದರೆ, ಪೊಲೀಸರು ಗೇಟುಗಳನ್ನು ಬಲವಾಗಿ ಹಿಡಿದುಕೊಂಡರು. ರ್ಯಾಲಿಯಲ್ಲಿ 1.5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ದಿಲ್ಲಿಗೆ ಸಮೀಪವಿರುವ ಗಾಝಿಯಾಬಾದ್, ಗೌತಮ್ ಬುದ್ಧ ನಗರ, ಬಾಘ್ಪಾಟ್ ಹಾಗೂ ಮೀರ್ ಸಹಿತ ಉತ್ತರಪ್ರದೇಶದ ಹಲವು ಜಿಲ್ಲೆಗಳಿಂದ ಬೆಂಬಲಿಗರು ಆಗಮಿಸಿದ್ದರು ಎಂದು ರ್ಯಾಲಿ ಆಯೋಜಿಸಿದ್ದ ವಿಶ್ವ ಹಿಂದೂ ಪರಿಷತ್ ಹೇಳಿದೆ.







