ಶಿವಪಾಲ್ ಯಾದವ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಲಾಯಂ ಭಾಗಿ
ಲಕ್ನೊ, ಡಿ.9: ‘ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ’ ಎಂಬ ನೂತನ ಪಕ್ಷ ಸ್ಥಾಪಿಸಿರುವ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಶಿವಪಾಲ್ ಯಾದವ್ ರವಿವಾರ ಆಯೋಜಿಸಿದ್ದ ‘ಬಲಪ್ರದರ್ಶನ’ ರ್ಯಾಲಿಯಲ್ಲಿ , ಸಮಾಜವಾದಿ ಪಕ್ಷದ ಸ್ಥಾಪಕ, ಶಿವಪಾಲ್ ಯಾದವ್ ಸಹೋದರ ಮುಲಾಯಂ ಸಿಂಗ್ ಯಾದವ್ ಅನಿರೀಕ್ಷಿತವಾಗಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ರ್ಯಾಲಿಯಲ್ಲಿ ಮುಲಾಯಂ ಸಿಂಗ್ ಪಾಲ್ಗೊಂಡಿರುವುದು ಶಿವಪಾಲ್ ಯಾದವ್ ನೂತನವಾಗಿ ಆರಂಭಿಸಿರುವ ಪಕ್ಷಕ್ಕೆ ಟಾನಿಕ್ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ರವಿವಾರ ಲಕ್ನೊದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ತನ್ನ ಭಾಷಣದಲ್ಲಿ ಪ್ರಗತಿಶೀಲ ಸಮಾಜವಾದಿ ಪಕ್ಷದ ಬಗ್ಗೆ ಸೊಲ್ಲೆತ್ತಲಿಲ್ಲ. ಆದರೆ, ಬಳಿಕ ಪಕ್ಷದ ಕಾರ್ಯಕರ್ತರೊಬ್ಬರು ಚೀಟಿಯೊಂದರಲ್ಲಿ ಏನೋ ಬರೆದು ಮುಲಾಯಂ ಕೈಗೆ ಕೊಟ್ಟ ಬಳಿಕ ಶಿವಪಾಲ್ ಯಾದವ್ ಹಾಗೂ ಅವರ ಪಕ್ಷದ ಪರವಾಗಿ ಮಾತನಾಡಿದರು. ಸಮಾಜವಾದಿ ಪಕ್ಷದ ನೂತನ ಮುಖಂಡರಾಗಿ ಆಯ್ಕೆಯಾದ ಮುಲಾಯಂ ಸಿಂಗ್ ಪುತ್ರ ಅಖಿಲೇಶ್ ಯಾದವ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಶಿವಪಾಲ್ ಯಾದವ್ ನೂತನ ಪಕ್ಷದ ಘೋಷಣೆ ಮಾಡಿದ್ದರು.
ಮುಲಾಯಂ ಸಿಂಗ್ ಸ್ಥಾಪಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷನಾಗಿ ಅಖಿಲೇಶ್ ಯಾದವ್ ಆಯ್ಕೆಯಾದ ಬಳಿಕ ಪಕ್ಷದಲ್ಲಿ ತನ್ನನ್ನು ಅವಮಾನಿಸಲಾಗುತ್ತಿದೆ ಎಂದು ದೂರಿದ್ದ ಶಿವಪಾಲ್, ಸಮಾಜವಾದಿ ಸೆಕ್ಯುಲರ್ ಮೋರ್ಛಾ ಎಂಬ ಪಕ್ಷವನ್ನು ಸ್ಥಾಪಿಸುವುದಾಗಿ ಕಳೆದ ಆಗಸ್ಟ್‌ನಲ್ಲಿ ಘೋಷಿಸಿದ್ದರು. ಆದರೆ ಅಕ್ಟೋಬರ್‌ನಲ್ಲಿ ತಾವು ಸ್ಥಾಪಿಸಿದ ನೂತನ ಪಕ್ಷಕ್ಕೆ ‘ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ’ ಎಂದು ನಾಮಕರಣ ಮಾಡಿದ್ದರು. 2019ರ ಚುನಾವಣೆಯಲ್ಲಿ ತಮ್ಮ ಪಕ್ಷ ಉತ್ತರಪ್ರದೇಶದ ಎಲ್ಲಾ 80 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಶಿವಪಾಲ್ ಯಾದವ್ ಘೋಷಿಸಿದ್ದರು.