ಯುಎಇ ಸಂಸತ್ತಿನಲ್ಲಿ ಮಹಿಳೆಯರಿಗೆ 50 ಶೇ. ಮೀಸಲು

ದುಬೈ, ಡಿ. 9: ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ, ಯುಎಇಯ ಫೆಡರಲ್ ನ್ಯಾಶನಲ್ ಕೌನ್ಸಿಲ್ (ಎಫ್‌ಎನ್‌ಸಿ)ನ 50 ಶೇಕಡ ಸ್ಥಾನಗಳನ್ನು ಮಹಿಳೆಯರು ತುಂಬುತ್ತಾರೆ.
ಕೌನ್ಸಿಲ್‌ನಲ್ಲಿ ಈಗ ಇರುವ ಮಹಿಳಾ ಪ್ರಾತಿನಿಧ್ಯವನ್ನು ಈಗಿನ 22.5 ಶೇಕಡದಿಂದ 50 ಶೇಕಡಕ್ಕೆ ಏರಿಸುವಂತೆ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯೆದ್ ಅಲ್ ನಹ್ಯನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ವಿಷಯದಲ್ಲಿ ಯುಎಇಯನ್ನು ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನದಲ್ಲಿ ಇರಿಸುವುದು ಇದರ ಉದ್ದೇಶವಾಗಿದೆ.
ಜಾಗತಿಕ ಮಟ್ಟದಲ್ಲಿ ದಶಕಗಳಲ್ಲಿ ಸಾಧಿಸಿರುವುದನ್ನು ಯುಎಇ ಮಹಿಳೆಯರು ದಾಖಲೆ ಅವಧಿಯಲ್ಲಿ ಸಾಧಿಸಲು ಸಾಧ್ಯವಾಗುವಂತೆ ಇದು ಮಾಡುತ್ತದೆ ಎಂದು ಅಲ್ ನಹ್ಯನ್ ಹೇಳಿದ್ದಾರೆ.
‘‘ಇದು ನಮ್ಮ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಶಾಸನಾತ್ಮಕ ಹಾಗೂ ಸಂಸದೀಯ ಪಾತ್ರವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಇದು ದೊಡ್ಡ ನೆಗೆತವಾಗಿದೆ’’ ಎಂದು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಹೇಳಿದರು.





