ಜನರಲ್ಲಿ ಜ್ಞಾನ ಬಿತ್ತುವ ಕೆಲಸ ಮಾಧ್ಯಮಗಳಿಂದಾಗಲಿ: ಡಾ. ಸುಬ್ಬರಾಯ

ಚಿಕ್ಕಮಗಳೂರು, ಡಿ.9: ಟೀಕೆ-ಟಿಪ್ಪಣಿಗಳಿಗಿಂತ ಜನರಲ್ಲಿ ಅರಿವು-ಜ್ಞಾನ ಬಿತ್ತುವ ಕೆಲಸ ಮಾಧ್ಯಮಗಳಿಂದಾಗಬೇಕೆಂಬುದು ಜನರ ಅಪೇಕ್ಷೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ನಗರದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಶ್ರೀದೇವಿ ಗುರುಕುಲದ ನೇತೃತ್ವದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮದಲ್ಲಿ ಸಂಸ್ಕೃತಿ ಮಿಳಿತವಾಗಿರಬೇಕು. ಸಂಸ್ಕೃತಿ ಎಂದರೆ ಗೊತ್ತು, ಗುರಿ, ಧರ್ಮ ಇದೆ ಎಂದರ್ಥ. ಘಟನೆ, ಪ್ರಕರಣ, ಹೇಳಿಕೆಗಳ ವೈಭವೀಕರಣ-ರೋಚಕಗೊಳಿಸುವ ಸಂಗತಿಗಳ ಬದಲು ಸತ್ಯಸಂಗತಿಯನ್ನು ಸರಳ ನೇರವಾಗಿ ಅರ್ಥಮಾಡಿಸುವುದು ಪ್ರಮುಖವಾಗುತ್ತದೆ. ಸೌಮ್ಯವಾಗಿ ಅಷ್ಟೇ ಮೊನಚಾಗಿ ಹೇಳುವುದು ಪರಿಣಾಮಕಾರಿಯಾಗಿರುತ್ತದೆ. ಮಾಧ್ಯಮಗಳು ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸುತ್ತಿವೆ. ಹಿಗ್ಗುವ-ಕುಗ್ಗುವ ಪ್ರಕ್ರಿಯೆಯಿಂದ ದೂರವಿದ್ದಾಗ ಸಾಧನೆ ಸಾಧ್ಯ ಎಂದು ಹೇಳಿದರು.
ಭುವನೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಚ್.ನರೇಂದ್ರಪೈ ಮುಖ್ಯಅತಿಥಿಗಳಾಗಿ ಮಾತನಾಡಿ, ಮಾಧ್ಯಮಗಳು ಸಮಾಜಕ್ಕೆ ಮಾದರಿ-ದಿಕ್ಸೂಚಿ. ಮಾಧ್ಯಮದಲ್ಲಿ ಬರುವ ಪದಗಳನ್ನು ಮಕ್ಕಳೂ ಸೇರಿದಂತೆ ಜನಸಾಮಾನ್ಯರು ಬಳಸುತ್ತಾರೆ. ಮಾಧ್ಯಮಗಳು ಕೀಳುಭಾಷೆ, ಅಸಂಸದೀಯ ಪದಗಳನ್ನು ದೂವಿಡುವುದು ಒಳಿತು ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜ್ ಮತ್ತು ಪಿ.ಜಿ.ವೈ.ಎಸ್.ಸದಸ್ಯ ದೀಪಕ್‌ದೊಡ್ಡಯ್ಯ ಮುಖ್ಯಅತಿಥಿ ಗಳಾಗಿದ್ದರು. ಶ್ರೀದೇವಿ ಗುರುಕುಲದ ಸಂಸ್ಥಾಪಕ ಡಾ.ದಯಾನಂದಮೂರ್ತಿಶಾಸ್ತ್ರಿ ಸ್ವಾಗತಿಸಿ, ವಂದಿಸಿದರು. ಸಂಗೀತ ಕಾರ್ಯಾಗಾರ ನಡೆಸಿಕೊಟ್ಟ ಬೆಂಗಳೂರಿನ ಗಾನಸುಧೆ ಸಂಸ್ಥೆಯ ಮುಖ್ಯಸ್ಥ ನಾದಭಾಸ್ಕರ ಶಿವಶಂಕರಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಆಧ್ಯಾತ್ಮಜೀವಿ ಎಚ್.ಗೋಪಿನಾಥ್, ಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾ ಶಾಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.







