ವೀರಶೈವ-ಲಿಂಗಾಯತ ಬೇರೆಬೇರೆಯಲ್ಲ: ಡಾ. ಎಂ. ಚಿದಾನಂದಮೂರ್ತಿ

ಶಿವಮೊಗ್ಗ, ಡಿ. 9: ವೀರಶೈವ ಹಾಗೂ ಲಿಂಗಾಯತ ಬೇರೆಬೇರೆಯಲ್ಲ. ಭೇದ ಮಾಡಲು ಅವಕಾಶವೇ ಇಲ್ಲ ಎಂದು ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಕುವೆಂಪು ರಂಗಮಂದಿರದಲ್ಲಿ ರವಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಮಾರಂಭದಲ್ಲಿ, ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಸ್ವೀಕರಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ಸಂಸ್ಕೃತಿಗೆ ಕೆಳದಿ ಅರಸರ ಕೊಡುಗೆ ಅಪಾರವಾಗಿದೆ. ಶಿವಪ್ಪನಾಯಕ, ಚನ್ನಮ್ಮನವರು ಈ ನಿಟ್ಟಿನಲ್ಲಿ ಸ್ಮರಣೆಯಲ್ಲಿ ಉಳಿಯುತ್ತಾರೆ. ಶಿವಪ್ಪನಾಯಕ ಓರ್ವ ಮಾಂಡಲಿಕನಾಗಿ ಸಮರ್ಥ ಆಡಳಿತ ನೀಡಿದ. ಕೆಳದಿ ಶಿವಪ್ಪನಾಯಕ ಹೆಸರಿನ ಪ್ರಶಸ್ತಿ ಸ್ವೀಕರಿಸಲು ತಮಗೆ ಅತೀವ ಸಂತಸವಾಗುತ್ತಿದೆ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಮಾಜ ಸಂಘಟನೆ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು.
ಸಮಾರಂಭದಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ರಾಜ್ಯ ಸಮಿತಿಯ ಸದಸ್ಯ ಡಾ. ಬಿ. ಶಿವಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್. ರುದ್ರೇಗೌಡ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖಂಡ ಎಸ್.ಎಸ್.ಜ್ಯೋತಿಪ್ರಕಾಶ್ ಇತರರಿದ್ದರು.





