ಕೊಡಗಿನಲ್ಲಿ ಕೃಷಿ ಭೂಮಿ ಪರಿವರ್ತನೆ ನಿಷಿದ್ಧ: ಸರಕಾರ ಆದೇಶ
ಮಡಿಕೇರಿ, ಡಿ.9: ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸುವುದನ್ನು ಸ್ಥಗಿತಗೊಳಿಸಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಪ್ರಕೃತಿ ವಿಕೋಪ ಹಾನಿಯ ಕಾರಣ ಮುಂದೊಡ್ಡಿ ರಾಜ್ಯ ಸರಕಾರ ಕೊಡಗು ಜಿಲ್ಲೆಗೆ ಸೀಮಿತಗೊಳಿಸಿ ಈ ಸುತ್ತೋಲೆ ಹೊರಡಿಸಿದ್ದು, ಈ ಸಂಬಂಧ ರಾಜ್ಯ ಸರಕಾರ ಕೈಗೊಂಡಿರುವ ತೀರ್ಮಾನದ ಕುರಿತು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಮಲಮ್ಮ, ನವೆಂಬರ್ 23ರಂದೇ ಕೊಡಗು ಜಿಲ್ಲಾಧಿಕಾರಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಈಚೆಗೆ ಕೊಡಗಿನಲ್ಲಿ ಮಳೆಯ ತೀವ್ರತೆ ಹಾಗೂ ಮಾನವ ನಿರ್ಮಿತ ಹಾನಿಯ ಕಾರಣಗಳಿಂದ ಎದುರಾಗಿರುವ ಭೂಕುಸಿತ ಇತ್ಯಾದಿಯ ಪರಿಣಾಮಗಳನ್ನು ಮನಗಂಡು ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಪರಿವರ್ತಿಸುವುದನ್ನು ಸ್ಥಗಿತಗೊಳಿಸಲು ಸರಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆದೇಶದಲ್ಲಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ನೀಡಿರುವ ಆಗಸ್ಟ್ ತಿಂಗಳ ಭೂಕುಸಿತಕ್ಕೆ ಸಾಕಷ್ಟು ಕಾರಣಗಳಿದ್ದರೂ, ಪ್ರಮುಖವಾಗಿ ಮಳೆ ಹಾಗೂ ಮಾನವ ಕೃತ್ಯ ಕಾರಣವಾಗಿದೆ. ಕೊಡಗಿನಲ್ಲಿ ಭೂ ಬಳಕೆಗೆ ಸರಿಯಾದ ನೀತಿ ಜಾರಿಾಗಲಿ, ನಿಯಮಗಳಾಗಲಿ ಇರುವುದಿಲ್ಲ.
ಸರಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೂಡಿ ಪಶ್ಚಿಮಘಟ್ಟ ಹಾಗೂ ವಿಶೇಷವಾಗಿ ಕೊಡಗಿನಲ್ಲಿ ಭೂ ಬಳಕೆ ಬಗ್ಗೆ ಸರಿಯಾದ ನೀತಿ ರೂಪಿಸಬೇಕು. ಭೂಕುಸಿತ ಹಾಗೂ ಬಫರ್ ಝೋನ್‌ಗಳಲ್ಲಿ ಯಾವ ರೀತಿಯ ಚಟುವಟಿಕೆ ಮಾಡಬಹುದು ಎಂಬ ಬಗ್ಗೆ ಕಟ್ಟು ನಿಟ್ಟಿನ ಕಾನೂನುರೂಪಿಸಬೇಕು ಎಂಬ ವರದಿಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.







