ನಂಜನಗೂಡು ಸಮೀಪದಲ್ಲಿ ಚಿರತೆ ಸೆರೆ

ನಂಜನಗೂಡು, ಡಿ.9: ನಂಜನಗೂಡು ತಾಲೂಕು ತುಮ್‌ನೇರಳೆ ಗ್ರಾಮದ ನಂಜುಂಡಸ್ವಾಮಿಯ ಕಬ್ಬಿನ ಗದ್ದೆಯಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಗಂಡು ಚಿರತೆ ಬಿದ್ದು ಸೆರೆಯಾಗಿದೆ.
ನಂಜನಗೂಡಿನ ಕೆಂಪಿಸಿದ್ದನಹುಂಡಿ, ತುಂಬ್‌ನೇರಳೆ, ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ 3-4 ಚಿರತೆಗಳು ಸಂಚರಿಸುವುದನ್ನು ನೋಡಿದ ರೈತರು, ಅರಣ್ಯ ಇಲಾಖೆಗೆ ತಿಳಿಸಿದ್ದರು. ನಂಜುಂಡಸ್ವಾಮಿಯವರ ಕೊಟ್ಟಿಗೆಯಲ್ಲಿ ಒಂದು 9ತಿಂಗಳ ಕರುವನ್ನು ತಿಂದು ಹೋಗಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮದ ರೈತರು ಅರಣ್ಯ ಇಲಾಖೆಗೆ ತಿಳಿಸಿ ಬೋನುಗಳನ್ನು ಇಡಲು ಒತ್ತಾಯಿಸಿದ್ದರು. ಜಮೀನಿನಲ್ಲಿ ಕೆಲಸಮಾಡುತ್ತಿದ್ದ ರೈತರು ಎದುರಿಗೇ ಓಡಾಡಿದ ಚಿರತೆಯನ್ನು ಕಂಡು, ರೈತರು ಬೆಚ್ಚಿಬಿದ್ದು ಓಡಿ, ಅರಣ್ಯ ಇಲಾಖೆಗೆ ವಲಯ ಅರಣ್ಯಾಧಿಕಾರಿ ಲೋಕೇಶ್ ಮೂರ್ತಿಯವರಿಗೆ ತಿಳಿಸಿದ ಕಾರಣ ಚಿರತೆಯ ಹೆಜ್ಜೆಗುರುತಿಸಿ, ಅರ್ಧಂಬರ್ದ ತಿಂದಿದ್ದ ಕರುವನ್ನು ಬೋನಿನಲ್ಲಿ ಇರಿಸಿದ್ದರು. ಬೋನು ಇರಿಸಿದ ಕೆಲವೇ ಗಂಟೆಯಲ್ಲಿ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ. ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಡುವುದಾಗಿ ತಿಳಿದು ಬಂದಿದೆ.
ಸ್ಥಳದಲ್ಲಿ ಮೊಕ್ಕಾಂ ಹೂಡಿದ ವಲಯಾಧಿಕಾರಿ ಲೋಕೇಶ್‌ಮೂರ್ತಿ, ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





