ಬಿಬಿಎಂಪಿ ಮುಚ್ಚಿಸಿದ ಗುಂಡಿಗಳು ಬಾಯ್ತೆರೆದಿವೆ: ಸ್ಥಳೀಕರ ಆರೋಪ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 35 ಗುಂಡಿಗಳು

ಬೆಂಗಳೂರು, ಡಿ.9: ಮೆಟ್ರೋ ಕಾಮಗಾರಿ ನಡೆಯುವ ಬಹುತೇಕ ಸ್ಥಳಗಳಲ್ಲಿ ರಸ್ತೆ ತುಂಬೆಲ್ಲ ಗುಂಡಿಗಳೇ ಕಾಣುತ್ತಿದ್ದು, ಅತ್ತಿಗುಪ್ಪೆಯಿಂದ ಮೈಸೂರು ರಸ್ತೆಗೆ ಹೋಗುವ ಮಾರ್ಗದಲ್ಲಿ ಮುಚ್ಚಿದ ಗುಂಡಿಗಳು ಬಾಯ್ತೆರೆದಿವೆ ಎಂದು ಸ್ಥಳೀಯ ಆರೋಪಿಸುತ್ತಿದ್ದಾರೆ.
ನಾಯಂಡಹಳ್ಳಿ, ಚಾಮರಾಜಪೇಟೆ, ವಿಜಯನಗರ, ಅತ್ತಿಗುಪ್ಪೆ, ಬಸವೇಶ್ವರ ನಗರ, ಯಶವಂತಪುರ, ಮೆಜಸ್ಟಿಕ್, ದಾಸರಹಳ್ಳಿ, ಶಿವಾನಂದ ಸರ್ಕಲ್ ಸೇರಿದಂತೆ ನಗರಾದ್ಯಂತ ಇನ್ನು ಗುಂಡಿಗಳಿವೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 6 ವಲಯಗಳಲ್ಲಿ ಗುಂಡಿಗಳೇ ಇಲ್ಲ. 2 ವಲಯದಲ್ಲಿ ಮಾತ್ರ ಬರೀ 35 ಗುಂಡಿಗಳಿವೆ. ಬೆಂಗಳೂರು ಪಶ್ಚಿಮ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರದಲ್ಲಿ ಹುಡುಕಿದರೂ ಗುಂಡಿ ಸಿಗಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆೆ.
ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ನಂತರ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ ಪಾಲಿಕೆ 2-3 ತಿಂಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲಾಗಿದೆ. ಬರೀ 35 ಗುಂಡಿಗಳು ಇವೆ ಎಂದು ಅಧಿಕಾರಿಗಳು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ವರದಿ ನೀಡಿದ್ದಾರೆ.
ಈ ಬಗ್ಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, ಬಿಡಬ್ಲೂಎಸ್‌ಎಸ್‌ಬಿ, ಬೆಸ್ಕಾಂ ಕಾಮಗಾರಿಯಿಂದ ಬಿದ್ದಿರುವ ಗುಂಡಿಗಳು, ವಾಟರ್ ಲೀಕೇಜ್‌ನಿಂದ ಬಿದ್ದ ಗುಂಡಿಗಳನ್ನು ಪರಿಗಣಿಸದೇ ವರದಿ ನೀಡಿರಬಹುದು. ಎಲ್ಲಾ ಗುಂಡಿಗಳನ್ನು ಪರಿಗಣಿಸಿ ಗುಂಡಿಗಳ ಬಗ್ಗೆ ಅಧಿಕಾರಿಗಳು ವರದಿ ನೀಡಬೇಕಿತ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಸಮರ್ಪಕ ವರದಿ ನೀಡುವಂತೆ ತಾಕೀತು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ವಲಯ- ಮುಚ್ಚಿರುವ ಗುಂಡಿ- ಬಾಕಿ ಇರುವ ಗುಂಡಿಗಳು
► ಪೂರ್ವ 16- 6
► ಪಶ್ಚಿಮ 0- 0
► ದಕ್ಷಿಣ 130- 0
► ಬೊಮ್ಮನಹಳ್ಳಿ 0- 0
► ದಾಸರಹಳ್ಳಿ 0- 0
► ಮಹಾದೇವಪುರ 0- 0
► ಆರ್.ಆರ್.ನಗರ 0- 0
► ಯಲಹಂಕ 19- 12
► ಇತರೆ 83- 17







