ನಿಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿ: ವಿರೋಧ ಪಕ್ಷಗಳಿಗೆ ಬಿಜೆಪಿ ಆಗ್ರಹ

ಕೋಲ್ಕತಾ, ಡಿ.10: ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯನ್ನು ಗೇಲಿ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯ, ‘‘ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕಿತ್ತೆಸೆಯಲು ಯೋಚಿಸುವ ಮೊದಲು ನಿಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಬೇಕು’’ ಎಂದು ಹೇಳಿದ್ದಾರೆ.
ಬಿಜೆಪಿ ವಿರೋಧಿ ರಂಗವನ್ನು ರಚಿಸುವ ಮಹತ್ವದ ಹೆಜ್ಜೆಯಾಗಿ ವಿರೋಧ ಪಕ್ಷಗಳ ಉನ್ನತ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸಭೆ ಸೇರಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ಮಹಾ ಮೈತ್ರಿಕೂಟ ರಚನೆಯ ಬಗ್ಗೆ ಚರ್ಚಿಸಲಿದ್ದಾರೆ.
‘‘ನಮ್ಮ ವಿರುದ್ಧ ಸೆಣಸಲು ವಿರೋಧ ಪಕ್ಷಗಳು ಮೈತ್ರಿಕೂಟ ರಚಿಸುತ್ತಿರುವುದು ಒಳ್ಳೆಯದೇ. ಆದರೆ, ಮೊದಲು ಅವರು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು. ಆ ನಂತರ ನಮ್ಮ ವಿರುದ್ಧ ಹೋರಾಡುವ ಹಾಗೂ ನಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಕನಸು ಕಾಣಲಿ. ನರೇಂದ್ರ ಮೋದಿ ನಮ್ಮ ಪ್ರಧಾನಿ, ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ತಿಳಿಸಿ’’ ಎಂದು ಕೈಲಾಶ್ ಸವಾಲೆಸೆದರು.