ತುಳು ಕ್ಯಾಲೆಂಡರ್ ‘ಕಾಲಕೊಂದೆ’ ಬಿಡುಗಡೆ

ಮಂಗಳೂರು, ಡಿ.10: ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ಪ್ರವೀಣ್‌ರಾಜ್ ಎಸ್.ರಾವ್ ತಯಾರಿಸಿದ ತೌಳವ ತಂತ್ರಾಂಶ ಬಳಸಿ ರಚಿಸಿದ ತುಳು ಭಾಷಾ ಕ್ಯಾಲೆಂಡರ್ ‘ಕಾಲಕೊಂದೆ’ಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಸೋಮವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ತುಳು ಭಾಷೆಯ ಮೇಲಿನ ಅಭಿಮಾನದಲ್ಲಿ ತುಳು ಕ್ಯಾಲೆಂಡರ್ ಜನರಿಗೆ ಮುಟ್ಟಿಸುವುದು ಶ್ಲಾಘನೀಯ ಕೆಲಸ. ತುಳುನಾಡಿನ ವಿವಿಧ ಆಚರಣೆಗಳು, ಹಬ್ಬ, ನೇಮ, ನಡಾವಳಿ ಬಗ್ಗೆ ವಿವರವಾಗಿ ಈ ಕ್ಯಾಲೆಂಡರ್‌ನಲ್ಲಿ ವಿವರಿಸಲಾಗಿದೆ ಎಂದರು.
ಡಾ.ರಾಜೇಶ್ ಆಳ್ವ ಮಾತನಾಡಿ, ಕಾಲಕೋಂದೆಯನ್ನು ಎಲ್ಲರಿಗೂ ಓದುವಂತಾಗಲು ಇಂಗ್ಲಿಷ್, ಕನ್ನಡ, ತುಳು ಅಕ್ಷರ, ಅಂಕೆಗಳನ್ನು ಬಳಸಲಾಗಿದೆ. ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು ಸೌರಮಾನ ಯುಗಾದಿ ದಿನ. ಆದರೆ ಎಲ್ಲರೂ ಪಾಶ್ಚಾತ್ಯ ಕ್ಯಾಲೆಂಡರ್ ಉಪಯೋಗಿಸುತ್ತಿರುವುದರಿಂದ ತುಳು ಕ್ಯಾಲೆಂಡರ್‌ನ್ನು ಸಹ ಜನವರಿಯಿಂದ ಆರಂಭಿಸಲಾಗಿದೆ ಎಂದರು.
ಪ್ರವೀಣ್‌ರಾಜ್ ಎಸ್.ರಾವ್ ಮಾತನಾಡಿ, ಯಾವುದೇ ಲಾಭದ ಅಪೇಕ್ಷೆ ಇಲ್ಲದೆ ತುಳುವಿನ ಅಭಿಮಾನದಿಂದ ಸತತ ಆರು ವರ್ಷಗಳಿಂದ ಕ್ಯಾಲೆಂಡರ್ ನಿರ್ಮಿಸಲಾಗುತ್ತಿದೆ. ದ.ಕ., ಉಡುಪಿ, ಮಡಿಕೇರಿ, ಬೆಂಗಳೂರು, ದೆಹಲಿ ಅಲ್ಲದೆ ಕೊಲ್ಲಿರಾಷ್ಟ್ರಗಳಿಗೂ ಈ ಕ್ಯಾಲೆಂಡರ್ ತಲುಪಿಸಲಾಗುವುದು ಎಂದರು.
ಸುರೇಶ್ ಬಿ.ಸಿ.ರೋಡ್ ಉಪಸ್ಥಿತರಿದ್ದರು.