ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮೂರು ಜಮೀನು ಗುರುತಿಸಲಾಗಿದೆ: ಲಾಲಾಜಿ

ಪಡುಬಿದ್ರಿ, ಡಿ. 10: ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಘನತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಮೂರು ಕಡೆ ಜಮೀನು ಗುರುತಿಸಲಾಗಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ತಿಳಿಸಿದರು.
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಆರ್ ಐಡಿಎಲ್ ಇಲಾಖೆಯಿಂದ ಅನುಷ್ಟಾನಿಸಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕವನ್ನು ರವಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ತ್ಯಾಜ್ಯ ವಿಲೇವಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ದೃಢ ಹೆಜ್ಜೆ ಇಡಬೇಕು. ಗ್ರಾಮಕ್ಕೆ ಅಗತ್ಯವಿರುವ ಯೋಜನೆಗಳಿಗಾಗಿ ಜಮೀನನ್ನು ಗುರುತಿಸುವ ಪ್ರಕ್ರಿಯೆ ನಡೆಯಬೇಕು. ಹೆಜಮಾಡಿಯಲ್ಲಿ ನೂತನ ಮಾರುಕಟ್ಟೆ ಅಥವಾ ಈಗಿರುವ ಮಾರುಕಟ್ಟೆ ದುರಸ್ತಿಗಾಗಿ ಅಗತ್ಯವಿರುವ ಅನುದಾನವನ್ನು ಒದಗಿಸಲು ಬದ್ಧನಿರುವುದಾಗಿ ಅವರು ಭರವಸೆ ನೀಡಿದರು.
ಹೆಜಮಾಡಿ ಬಂದರು ಯೋಜನೆಗೆ ಕೇಂದ್ರ ಕೃಷಿ ಸಚಿವಾಲಯದಿಂದ ಮೀನುಗಾರಿಕಾ ಇಲಾಖೆಗೆ ರೂ. 13 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಂದರು ಯೋಜನೆಗೆ ಸಮಾನಾಗಿ ರಾಜ್ಯ ಸರ್ಕಾರದ ಅನುದಾನವೂ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸಂಪುಟ ಅನುಮೋದನೆ ಬಳಿಕ ಏಜೆನ್ಸಿ ಗೊತ್ತುಪಡಿಸಿ ಟೆಂಡರ್ ಅಂತಿಮಗೊಳಿಸಲಾಗುವುದು. ಹೆಜಮಾಡಿ ಬಂದರು ನಿರ್ಮಾಣಕ್ಕೆ ಅಗತ್ಯವಿರುವ 35 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗಾಗಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ ಎಂದರು.
ಹೆಜಮಾಡಿ ಗ್ರಾಪಂನ ನೂತನ ಕಟ್ಟಡ, ನಾರಾಯಣ ಗುರು ಮಂದಿರ, ಲಕ್ಷ್ಮೀನಾರಯಣ ದೇವಸ್ಥಾನ ಹಾಗೂ ಗುಂಡಿ ರಸ್ತೆ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು ಪುತ್ರನ್ ಶಾಸಕರಿಗೆ ಮನವಿ ಮಾಡಿದರು.
2016-17ನೇ ಸಾಲಿನ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ 9.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಐದು ಸಾವಿರ ಲೀಟರ್ ನೀರು ಸಂಗ್ರಹಣ ಸಾಮಥ್ರ್ಯದ ಶುದ್ಧ ಕುಡಿಯುವ ಘಟಕದಲ್ಲಿ ಎರಡು ರೂಪಾಯಿ ಕಾಯಿನ್ ಬಳಸಿ ಹತ್ತು ಲೀಟರ್ ಹಾಗೂ ಐದು ರೂಪಾಯಿ ಕಾಯಿನ್ ಬಳಸಿ ಇಪ್ಪತ್ತು ಲೀಟರ್ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಡಿಒ ಮಮತಾ ವೈ ಶೆಟ್ಟಿ ಮಾಹಿತಿ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ವಾಮನ ಕೋಟ್ಯಾನ್ ನಡಿಕುದ್ರು, ವಾಸು ಕೋಟ್ಯಾನ್, ರೇಷ್ಮಾ, ಕೆಆರ್ ಐಡಿಎಲ್ ಇಂಜಿನಿಯರ್ ದಿವ್ಯರಾಜ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಉಪಸ್ಥಿತರಿದ್ದರು.