ಕೆ.ಆರ್.ಪೇಟೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಕೆ.ಆರ್.ಪೇಟೆ, ಡಿ.10: ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗುಡುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಶೋಕ(45) ಆತ್ಮಹತ್ಯೆ ಮಾಡಿಕೊಂಡವರು. ಇವರು ಎರಡೂವರೆ ಎಕರೆ ಜಮೀನು ಹೊಂದಿದ್ದು, ಜಮೀನಿನಲ್ಲಿ ಭತ್ತ, ಬಾಳೆ ಬೆಳೆ ಹಾಕಿದ್ದರು.
ಬೇಸಾಯಕ್ಕೆಂದು ಸೋಮನಹಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 60 ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ 80 ಸಾವಿರ ಜೊತೆಗೆ 3 ಲಕ್ಷ ಕೈಸಾಲ ಮಾಡಿದ್ದರು ಎನ್ನಲಾಗಿದೆ.
ಜಮೀನಿನಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ಸರಿಯಾಗಿ ನೀರು ಬಾರದೇ ಹಾಕಿದ್ದ ಬೆಳೆಯು ಒಣಗುತ್ತಿತ್ತು. ಇದರಿಂದ ಮನನೊಂದು ರವಿವಾರ ಸಂಜೆ ತಮ್ಮ ಜಮೀನಿ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಪುತ್ರ ಕಿರಣ್ ಕುಮಾರ್ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿದ್ದಾರೆ.
ಮೃತರಿಗೆ ಪತ್ನಿ ಲಲಿತಾ, ಪುತ್ರ, ಪುತ್ರಿ ಇದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.





