ವರ್ಣ ನೀತಿ ಮಾನವ ಹಕ್ಕುಗಳ ಉಲ್ಲಂಘನೆ: ವೆಂಕಟೇಶ್ ನಾಯ್ಕ

ಉಡುಪಿ, ಡಿ.10: ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ಬಂದು ಹಲವು ವರ್ಷಗಳಾದರೂ ಇನ್ನು ವರ್ಣ ನೀತಿ ಹೋಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಣ್ಣುಂದೆ ನಡೆಯುತ್ತಿದ್ದರೂ ವೌನವಾಗಿದ್ದೇವೆ. ಈ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಸಮಾಜಕ್ಕೆ ತಿಳಿಹೇಳುವ ಕಾರ್ಯ ಆಗಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅಭಿಯೋಗ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಉಡುಪಿ ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಗೌರವಾನ್ವಿತನಾಗಿ ಆತ್ಮ ಗೌರವದಿಂದ ಜೀವನ ನಡೆಸುವ ಹಕ್ಕು ಹೊಂದಿದ್ದು, ಇದಕ್ಕೆ ಚ್ಯುತಿ ಬಂದಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತದೆ. ವೃದ್ದ ಪೋಷಕರನ್ನು ಮಕ್ಕಳು ನಿರ್ಲಕ್ಷ ಮಾಡುವುದು, ವಿಕಲಚೇತನ ಮಕ್ಕಳನ್ನು ಪೋಷಕರು ತಿರಸ್ಕಾರದಿಂದ ಕಾಣುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸಮಾಜದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದಲೇ ಹಕ್ಕುಗಳು ದೊರೆಯುತ್ತವೆ. ಇವುಗಳ ರಕ್ಷಣೆ ಸರಕಾರಗಳ ಕರ್ತವ್ಯವಾಗಿದೆ. ಮಹಾಯುದ್ದಗಳ ಸಂದರ್ಭದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದ್ದು, 1948ರ ಡಿ.10ರಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗೆ ಕರೆ ನೀಡಿತ್ತು ಎಂದು ತಿಳಿಸಿದರು.
ಭಾರತ ಸಂವಿಧಾನದಲ್ಲೂ ಕೂಡ ಮಾನವ ಹಕ್ಕುಗಳನ್ನು ಅಳವಡಿಸಲಾಗಿದ್ದು, ಆದರೆ ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ನಾಶಪಡಿಸುವಿಕೆ, ವಾತಾ ವರಣವನ್ನು ಕಲುಷಿತಗೊಳಿಸುವುದು, ಭೂಸಂತ್ರಸ್ಥರಿಗೆ ಸೂಕ್ತ ಪುರ್ನವಸತಿ ಸೌಲ್ಯ ಒದಗಿದೆ ಇರುವುದೂ ಕೂಡ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಾ ಬಾಯಿ ಉಪಸ್ಥಿತರಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಪೃಥ್ವಿರಾಜ ಹೆಗ್ಡೆ ಸ್ವಾಗತಿಸಿದರು. ವಕೀಲ ಶ್ರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.