ಕಾಪು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮುದ್ದು ಮೂಡುಬೆಳ್ಳೆ

ಕಾಪು, ಡಿ.10: ಕುತ್ಯಾರು ಶ್ರೀಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ಡಿ.20ರಂದು ನಡೆಯಲಿರುವ ಕಾಪು ತಾಲೂಕಿನ ಪ್ರಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಕಾಶವಾಣಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕವಿ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ.
ಮೂಲತಃ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ನಿವಾಸಿಯಾಗಿರುವ ಮುದ್ದು ಮೂಡುಬೆಳ್ಳೆ, ಎಂ.ಎ. ಕನ್ನಡ, ಎಂ.ಎ. ಸಮಾಜಶಾಸ್ತ್ರ, ಸ್ನಾತಕೋತ್ತರ ಡಿಪ್ಲೊಮಾ(ಕೊಂಕಣಿ), ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಗಳಿಸಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ ಇವರು, 1985ರಿಂದ ಮಂಗಳೂರು ಆಕಾಶವಾಣಿಯಲ್ಲಿ ಹಿರಿಯ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ವಯೋ ನಿವೃತ್ತಿಯ ನಂತರ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಬ್ರಹ್ಮಶ್ರೀ ನಾರಾ ಯಣಗುರು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.
ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ, ಜಾನಪದ ಮತ್ತು ಇತಿಹಾಸ ಅಧ್ಯಯನಕಾರರಾಗಿರುವ ಮುದ್ದು ಮೂಡುಬೆಳ್ಳೆ, ಕನ್ನಡ, ತುಳು ಭಾಷೆಗಳಲ್ಲಿ 30 ಕೃತಿಗಳನ್ನು ರಚಿಸಿದ್ದಾರೆ. ಏಳು ಕಥಾ ಸಂಕಲನಗಳು, ನಾಲ್ಕು ಕವನ ಸಂಕಲನಗಳು, 3 ಕಾದಂಬರಿ, ಹಾಗೂ 15 ಇತರ ಪ್ರಕಾರದ ಕೃತಿಗಳ ಲೇಖಕ ರಾಗಿದ್ದಾರೆ. 50ಕ್ಕೂ ಅಧಿಕ ಕೃತಿಗಳ ಸಂಪಾದಕ ಸಮಿತಿಯಲ್ಲಿ ದುಡಿದಿದ್ದಾರೆ.
2004ರಲ್ಲಿ ಸತ್ಯದ ಸುರಿಯ ಸಾಯದ ಪಗರಿ ತುಳು ಕಾದಂಬರಿಗೆ ಪಣಿಯಾಡಿ ಸಾಹಿತ್ಯ ಪ್ರಶಸ್ತಿ, 2012ನೇ ಸಾಲಿನಲ್ಲಿ ಕಾಂತಬಾರೆ ಬೂದಬಾರೆ ಜಾನಪದ ಅಧ್ಯಯನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ ಪಡೆದಿರುವ ಇವರು, 2009ರಲ್ಲಿ ಆಕಾಶವಾಣಿಯ ರಾಜ್ಯಮಟ್ಟದ (ಪ್ರಥಮ) ಪ್ರಶಸ್ತಿ ಪಡೆದಿದ್ದಾರೆ. ಇವರ 3 ಕೃತಿಗಳು ಮಂಗಳೂರು ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಗೆ ಪಠ್ಯವಾಗಿವೆ ಎಂದು ಪ್ರಕಟಣೆ ತಿಳಿಸಿದೆ.