ಮಂಗಳೂರಿನಲ್ಲಿ ಸರಗಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
3.50 ಲಕ್ಷ ರೂ. ಚಿನ್ನಾಭರಣ, ಆ್ಯಕ್ಟೀವಾ ವಶಕ್ಕೆ

ಮಂಗಳೂರು, ಡಿ.10: ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ರೌಡಿನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಪ್ಪು ಬಪ್ಪಾಲದ ಹರೀಶ್ ಎಸ್. ನಾಥ್(45), ಬಜಾಲ್‌ನ ರಾಜೇಶ್(45) ಬಂಧಿತ ಆರೋಪಿಗಳು.
ಬಂಧಿತರಿಂದ 3,64,000 ರೂ. ಮೌಲ್ಯದ 126.960 ಗ್ರಾಂ ಚಿನ್ನಾಭರಣ ಸಹಿತ ಒಂದು ಆ್ಯಕ್ಟಿವಾ ಸ್ಕೂಟರ್ ವಶಪಡಿಸಿಕೊಂಡಿದ್ದು, ಸೊತ್ತುಗಳ ಒಟ್ಟು ಮೌಲ್ಯ 3,74,000 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬಂದು ಪಾದಚಾರಿ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಕಾವೂರು ಠಾಣೆಯಲ್ಲಿ 1 ಪ್ರಕರಣ ಮತ್ತು ದಕ್ಷಿಣ ಠಾಣೆಯಲ್ಲಿ 2 ಸುಲಿಗೆ ಯತ್ನ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ, ಸಹಾಯಕ ಪೊಲೀಸ್ ಆಯುಕ್ತ ಕೇಂದ್ರ ಉಪ ವಿಭಾಗದ ಭಾಸ್ಕರ ಒಕ್ಕಲಿಗ, ಹಾಗೂ ಕೇಂದ್ರ ಉಪ ವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಪೊಲೀಸ್ ಉಪ ನಿರೀಕ್ಷಕ ಪ್ರದೀಪ ಟಿ.ಆರ್. ಹಾಗೂ ಸಿಬ್ಬಂದಿ ವೆಲೆಸ್ಟೀನ್ ಜಾರ್ಜ್ ಡಿಸೋಜ, ಗಂಗಾಧರ ಎನ್., ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್, ಪ್ರಮೋದ್ ಮೇರಿಹಿಲ್, ನಾಗರಾಜ ಚಂದರಗಿ, ಬಸವರಾಜ ನಾಯ್ಕಾ ಭಾಗವಹಿಸಿದ್ದರು.