ಮೀನುಗಾರಿಕೆಗೆ ತೆರಳಿದ್ದ ಬೋಟು ಮುಳುಗಡೆ: ಎಂಟು ಮಂದಿ ರಕ್ಷಣೆ

ಮಂಗಳೂರು, ಡಿ.10: ಇಲ್ಲಿನ ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ‘ಮದರ್ ಇಂಡಿಯಾ’ ಹೆಸರಿನ ಬೋಟ್ ಸೋಮವಾರ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಲ್ಲ ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಎಂಟು ಮಂದಿ ಮೀನುಗಾರರಿದ್ದ ‘ಮದರ್ ಇಂಡಿಯಾ’ ಬೋಟ್ ನಾಲ್ಕು ದಿನಗಳ ಹಿಂದೆ ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಸುಮಾರು 50- 60 ಕಿ.ಮೀ. ದೂರ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.
ಅಕ್ಕ ಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ಗಳನ್ನು ಕರೆಸಿದಾಗ 3-4 ಬೋಟ್‌ಗಳು ರಕ್ಷಣೆಗೆ ಬಂದಿದ್ದು, ‘ಸಹಾರಾ’ ಹೆಸರಿನ ಬೋಟ್‌ನಲ್ಲಿದ್ದವರು ಈ ನತದೃಷ್ಟ ಬೋಟ್‌ನಲ್ಲಿದ್ದ ಎಲ್ಲ ಎಂಟು ಮಂದಿಯನ್ನು ತಮ್ಮ ಬೋಟ್‌ಗೆ ಹಾಕಿ ರಕ್ಷಿಸಿದರು. ಬಳಿಕ ಇಂಜಿನ್ ಕೆಟ್ಟು ಹೋದ ‘ಮದರ್ ಇಂಡಿಯಾ’ ಬೋಟ್‌ನ್ನು ಎಳೆದು ದಡಕ್ಕೆ ತರಲು ಉಳಿದ ಎಲ್ಲ ಬೋಟ್‌ನವರು ಪ್ರಯತ್ನಿಸಿದ್ದರೂ ಪ್ರಯೋಜನವಾಗದೆ ಅದು ನೀರಿನಲ್ಲಿ ಮುಳುಗಡೆಯಾಯಿತು ಎಂದು ತಿಳಿದುಬಂದಿದೆ.
ಅಪಾಯದಿಂದ ಪಾರಾದ ಎಲ್ಲ ಎಂಟು ಮಂದಿ ಮೀನುಗಾರರು ತಮಿಳುನಾಡು ಮೂಲದವರಾಗಿದ್ದು, ಅವರನ್ನು ಸೋಮವಾರ ಸಂಜೆ ಹಳೆ ಬಂದರು ಧಕ್ಕೆಗೆ ಕರೆ ತರಲಾಗಿದೆ.