ಭಾರತದ ವಸ್ತು ಸಂಗ್ರಹಾಲಯಗಳು ನಮ್ಮ ಸಾಂಸ್ಕೃತಿಕ ರಾಯಭಾರಿಗಳು: ಡಾ. ಡೇನಿಯಲಾ ಡಿಸೈಮೋ

ಬಂಟ್ವಾಳ, ಡಿ. 10: ಭಾರತದ ವಸ್ತು ಸಂಗ್ರಹಾಲಯಗಳು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಇಲ್ಲಿ ಅತ್ಯುತ್ತಮ ಮ್ಯೂಸಿಯಂಗಳಿದ್ದು ಇವುಗಳ ಮೂಲಕ ಇತಿಹಾಸ ದರ್ಶನವಾಗುತ್ತದೆ ಎಂದು ಲಂಡನಿನ್ ಬ್ರಿಟಿಷ್ ಮ್ಯೂಸಿಯಂನ ಪ್ರೋಜೆಕ್ಟ್ ಕ್ಯೂರೇಟರ್ ಡಾ. ಡೇನಿಯಲಾ ಡಿ ಸೈಮೋ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಪ್ರಾದೇಶಿಕ ವೈವಿಧ್ಯ, ಭಾಷೆಗಳನ್ನು ವಸ್ತು ಸಂಗ್ರಹಾಲಯ ತಿಳಿಸುತ್ತದೆ. ನಮಗಾಗಿಯಾದರೂ ಇತಿಹಾಸವನ್ನು ಅರಿಯಬೇಕು ಎಂದರು.
ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಭಾರತದ ಮೂಲ ಸಾಂಸ್ಕೃತಿಯ ವಿಚಾರ ವೈವಿಧ್ಯಗಳ ಕುರಿತು ಮಾಹಿತಿ ನೀಡಿದರು.
ಸಮನ್ವಯಕಾರರಾಗಿ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ, ವಸ್ತು ಸಂಗ್ರಹಾಲಯ ಒಳಹೊಕ್ಕ ವ್ಯಕ್ತಿ ಹೊಸ ಮನುಷ್ಯನಾಗಿ ಹೊರ ಬರುತ್ತಾನೆ. ಇಂದು ಮ್ಯೂಸಿಯಂಗಳಲ್ಲಿ ಸಂಗ್ರಹವಾಗಿರುವುದಕ್ಕಿಮದ ಅಧಿಕ ವಸ್ತುಗಳು ಹೊರ ಪ್ರಪಂಚದಲ್ಲಿದೆ ಎಂದರು.
ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿ ವಂದಿಸಿದರು. ಎಸ್‍ಡಿಎಂ, ಬೆಸೆಂಟ್, ಆಳ್ವಾಸ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.







