ದೇಶದ ಆಂತರಿಕ ಭದ್ರತೆಯಲ್ಲಿ ಗೃಹರಕ್ಷಕರ ಸೇವೆ ಅಪಾರ : ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್

ಮಂಗಳೂರು, ಡಿ.11: ದೇಶದ ಆಂತರಿಕ ಭದ್ರತೆಯಲ್ಲಿ ಪೊಲೀಸರಿಗೆ ಸಮಾನಾಂತರವಾಗಿ ಗೃಹರಕ್ಷಕರು ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಅವರಿಗೆ ಸರಕಾರ ಹೆಚ್ಚಿನ ಸವಲತ್ತು ಒದಗಿಸುವ ಅಗತ್ಯವಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾ ಗೃಹರಕ್ಷಕ ದಳವು ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಕಚೇರಿಯಲ್ಲಿ ರವಿವಾರ ಆಯೋಜಿಸಿದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಗೃಹರಕ್ಷಕ ದಳದ ಮಾಜಿ ಘಟಕಾಧಿಕಾರಿ ಸುಳ್ಯದ ಗಿರೀಶ್ ಭಾರದ್ವಾಜ್ ಮಾತನಾಡಿ ಗೃಹರಕ್ಷಕರು ಉತ್ಸಾಹ, ಪ್ರಾಮಾಣಿಕತೆಯಿಂದ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಅತಿಥಿಯಾಗಿದ್ದರು. ಪಣಂಬೂರು ಘಟಕಾಧಿಕಾರಿ ಹರೀಶ್ ಆಚಾರ್ಯ, ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ, ಬಂಟ್ವಾಳ ಪ್ರಭಾರ ಘಟಕಾಧಿಕಾರಿ ಶ್ರೀನಿವಾಸ್ ಆಚಾರ್ಯ, ಬೆಳ್ತಂಗಡಿ ಘಟಕದ ಎಎಸ್‌ಎಲ್ ಅಪ್ಪುಅವರನ್ನು ಸನ್ಮಾನಿಸಲಾಯಿತು.
ಉಪ್ಪಿನಂಗಡಿ ಸಹಸ್ತಲಿಂಗೇಶ್ವರ ದೇವಳದ ನೇತ್ರಾವತಿ ನದಿಯಲ್ಲಿ ಸಂಗಮವಾದ ಸಂದರ್ಭ ಜಿಲ್ಲಾಡಳಿತದ ಸೂಚನೆ ಮೇರೆಗೆ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತದ ಸಂದರ್ಭ ಮಣ್ಣುಪಾಲಾದ ನಾಲ್ವರಲ್ಲಿ ಮೂರು ಮೃತದೇಹಗಳನ್ನು ಪತ್ತೆ ಮಾಡಿ ಹೊರತೆಗೆದ ಸುಳ್ಯ ಘಟಕದ ಗೃಹರಕ್ಷಕರಾದ ಅಬ್ದುಲ್ ಗಫೂರ್, ದೇವರಾಜ್, ಕಿರಣ್, ಸಚಿನ್ ಪ್ರಶಾಂತ್, ಗಿರಿಧರ ಹಾಗೂ ಉಪ್ಪಿನಂಗಡಿ ಘಟಕದ ದಿನೇಶ್ ಬಿ., ಅಣ್ಣು ಬಿ., ಜನಾರ್ದನ ಆಚಾರ್ಯ, ಅಶೋಕ್, ವಸಂತ ಕೆ., ಅವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ಅಧೀಕ್ಷಕ ರತ್ನಾಕರ ಎಂ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ಸುರೇಶ್ ಶೇಟ್, ಲೀಲಾ ಕುಕ್ಯಾನ್, ರಾಜಶ್ರೀ, ಕೇಶವ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.
ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಕಮಾಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ವಾರ್ಷಿಕ ವರದಿ ವಾಚಿಸಿದರು. ಮಂಗಳೂರು ಘಟಕದ ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ವಂದಿಸಿದರು. ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಕಾರ್ಯಕ್ರಮ ನಿರೂಪಿಸಿದರು.