'ದ.ಕ.ಜಿಲ್ಲೆಯಲ್ಲಿ ಸದ್ಯ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಇಲ್ಲ'
ಐವನ್ ಡಿಸೋಜರ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರ
ಮಂಗಳೂರು, ಡಿ.11:ದ.ಕ.ಜಿಲ್ಲೆಯಲ್ಲಿ ಸದ್ಯ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ಪ್ರಸ್ತಾವನೆ ಇಲ್ಲ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಯಾವ ಹಂತದಲ್ಲಿದೆ? ಈ ಬಗ್ಗೆ ಸ್ಥಳ ಗುರುತಿಸಲಾಗಿದೆಯೇ? ಪ್ರಾರಂಭಿಸಲು ಸರಕಾರ ಕೈಗೊಂಡ ಕ್ರಮವೇನು? ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಹೊಸ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಸುಮಾರು 610 ಕೋ.ರೂ.ಗಳ ಅನಾವರ್ತಕ ವೆಚ್ಚ ಹಾಗೂ ವಾರ್ಷಿಕ 60 ಕೋ.ರೂ.ಗಳ ಅವರ್ತಕ ವೆಚ್ಚದ ಅವಶ್ಯಕತೆ ಇದೆ. ರಾಜ್ಯದಲ್ಲಿ 16 ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, 2550 ಎಂಬಿಬಿಎಸ್ ಮತ್ತು 942 ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಸೀಟುಗಳಿರುತ್ತದೆ. 2018-19ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾದ್ಯಾಲಯ ಮತ್ತು ಸಂಶೋದನಾ ಸಂಸ್ಥೆ ಹಾಗೂ ರಾಮನಗರದಲ್ಲಿ ಕನಕಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಿತ ಎರಡು ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.
ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ: ಬಜ್ಪೆಪ್ರಾಥಮಿಕ ಆರೋಗ್ಯಕೇಂದ್ರ ಉನ್ನತೀಕರಿಸಲು 2016-17ನೇ ಸಾಲಿನಲ್ಲಿ ಪ್ರಸ್ತಾವನೆ ಸ್ವೀಕರಿಸಲಾಗಿದ್ದರೂ ಕೂಡ ಈವರೆಗೂ ಉನ್ನತೀಕರಿಸದಿರಲು ಕಾರಣವೇನು? ಎಂಬ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಎಸ್. ಪಾಟೀಲ ಉತ್ತರಿಸಿ ಗ್ರಾಪಂನ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮರು ವಿನ್ಯಾಸವನ್ನು ಪೂರ್ಣಗೊಳಿಸಿದ ನಂತರ ಇಂತಹ ಪ್ರಸ್ತಾವನೆಗಳನ್ನು ವಿಶ್ಲೇಷಿಸಿ ತೀರ್ಮಾನಿಸಲಾಗುವುದು. ಬಜ್ಪೆಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉನ್ನತೀಕರಿಸಲು 145 ಲಕ್ಷ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದರು.
ಜಿಲ್ಲೆಯಲ್ಲಿ 77 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಆ ಪೈಕಿ 23 ಶುದ್ದ ಕುಡಿಯುವ ನೀರಿನ ಘಟಕಗಳು ಪೂರ್ಣಗೊಂಡಿವೆ. 14 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 9 ಘಟಕಗಳು ತಾಂತ್ರಿಕ ತೊಂದರೆಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. 25 ಘಟಕಗಳು ನಿರ್ಮಾಣ ಹಂತದಲ್ಲಿದೆ. 29 ಘಟಕಗಳನ್ನು ದ.ಕ.ಜಿಪಂ ಸಿಇಒ ಅವರ ಕೋರಿಕೆಯಂತೆ ಕೈಬಿಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದರು.
ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುವ ಜವಬ್ದಾರಿಯನ್ನು ಮೂಲ ಗುತ್ತಿಗೆದಾರ ಬೆಂಗಳೂರಿನ ಮೆ ಪ್ಯಾನ್ ಏಷ್ಯಾ ವರ್ಲ್ಡ್‌ವೈಡ್‌ಗೆ ವಹಿಸಿಕೊಡಲಾಗಿತ್ತು. ಆದರೆ ಅವರ ಟೆಂಡರ್ ಕರಾರು ರದ್ದಾಗಿರುವುದರಿಂದ ಈವರೆಗೆ ಪೂರ್ಣಗೊಳಿಸಿರುವ ಘಟಕಗಳ ನಿರ್ವಹಣೆಯನ್ನು ಉಪಭಾಗ ವತಿಯಿಂದಲೇ ನಿರ್ವಹಿಸಲಾಗುತ್ತಿದೆ. ದುರಸ್ಥಿ ಕಾಮಗಾರಿಯನ್ನು ಸರಕಾರದಿಂದ ಬಿಡುಗಡೆಯಾದ ಅನುದಾನ ಬಳಸಿ ನಿರ್ವಹಿಸಲಾಗುತ್ತಿದೆ ಎಂದರು.