ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಸಿಪಿಎಂ ವಿರೋಧ
ಮಂಗಳೂರು, ಡಿ.11: ಮಂಗಳೂರು ಸಹಿತ ದೇಶದ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ತೀರ್ಮಾನಿಸಿರುವುದನ್ನು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಜಿಲ್ಲೆಯ ಹೆಮ್ಮೆಯ ಪ್ರತೀಕವಾದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಖಾಸಗಿ ಕಂಪೆನಿಗಳಿಗೆ ಲೂಟಿ ಮಾಡಲು ತೆರೆದಿಡುವ ಸರಕಾರದ ನೀತಿಯು ಜಿಲ್ಲೆಯ ಜನತೆಯ ಅವಿಶ್ರಾಂತ ಹೋರಾಟಕ್ಕೆ ಮಸಿ ಬಳಿಯುವ ನೀತಿಯಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಕಾರ್ಮಿಕ ಸಂಘವು ಸೋಮವಾರದಿಂದ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಪಕ್ಷದ ಬೆಂಬಲವನ್ನು ಸಾರಿದ್ದಾರೆ. ಅಲ್ಲದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಖಾಸಗೀಕರಣಗೊಳ್ಳುವುದು ಸಂಸದ ನಳಿನ್ ಕುಮಾರ್ ಕಟೀಲ್‌ರ ವಿಫಲತೆಗೆ ಇನ್ನೊಂದು ಗರಿ ಮೂಡಿಸಿದೆ. ಮಂಗಳೂರು ವಿಮಾನ ನಿಲ್ದಾಣವು ಜಿಲ್ಲೆಯ ಶಿಕ್ಷಣ, ಕೈಗಾರಿಕೆ, ಆಸ್ಪತ್ರೆ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾದ ಕೊಡುಗೆಯನ್ನು ನೀಡಿದೆ. ಈ ನಿಲ್ದಾಣವು ಖಾಸಗೀಕರಣಗೊಂಡರೆ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವ ಅಪಾಯವಿದೆ ಎಂದು ವಸಂತ ಆಚಾರಿ ತಿಳಿಸಿದ್ದಾರೆ.