ಮಿಝೊರಾಂ:10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಿದ ಎಂಎನ್ಎಫ್
(ಕಾಂಗ್ರೆಸ್ಗೆ ಹೀನಾಯ ಸೋಲು)
![ಮಿಝೊರಾಂ:10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಿದ ಎಂಎನ್ಎಫ್ ಮಿಝೊರಾಂ:10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಿದ ಎಂಎನ್ಎಫ್](https://www.varthabharati.in/sites/default/files/images/articles/2018/12/11/167470.jpg)
ಐಜ್ವಾಲ್,ಡಿ.11: ಮಂಗಳವಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಮಿಝೊರಾಂನಲ್ಲಿ ಮಿಝೊ ನ್ಯಾಷನಲ್ ಫ್ರಂಟ್ (ಎಂಎನ್ಎಫ್) 10 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. 40 ಸದಸ್ಯಬಲದ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಅದು ಕಾಂಗ್ರೆಸ್ಗೆ ಹೀನಾಯ ಸೋಲನ್ನುಣ್ಣಿಸಿದೆ. 2013ರ ಚುನಾವಣೆಯಲ್ಲಿ 34 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ ಐದು ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡಿದ್ದು,ಇದರೊಂದಿಗೆ ಈಶಾನ್ಯದ ಎಲ್ಲ ಏಳೂ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ.
ತನ್ನ ತವರು ಕ್ಷೇತ್ರ ಸೆರ್ಚಿಪ್ ಜೊತೆಗೆ ಚಂಪಲ್ ದಕ್ಷಿಣ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರು ಎರಡೂ ಕಡೆಗಳಲ್ಲಿ ಪರಾಭವಗೊಂಡಿದ್ದಾರೆ.
ಬಿಜೆಪಿಗೆ ಕೇವಲ ಒಂದು ಸ್ಥಾನ ಪ್ರಾಪ್ತಿಯಾಗಿದ್ದು,ಎಂಟು ಕ್ಷೇತ್ರಗಳಲ್ಲಿ ಇತರರು ಪ್ರಾಬಲ್ಯ ಮೆರೆದಿದ್ದಾರೆ.
ದಕ್ಷಿಣ ಮಿಝೊರಾಂನ ಚಕ್ಮಾ ಪ್ರಾಬಲ್ಯದ ಲಾನ್ಗತಲೈ ಜಿಲ್ಲೆಯ ತಿಚಾವಂಗ್ ಕೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬುದ್ಧ ಧನ್ ಚಕ್ಮಾ ಅವರು ಗೆಲ್ಲುವುದರೊಂದಿಗೆ ಕ್ರೈಸ್ತರೇ ಬಹುಸಂಖ್ಯಾತರಾಗಿರುವ ಈ ರಾಜ್ಯದಲ್ಲಿ ಬಿಜೆಪಿಯು ತನ್ನ ಖಾತೆಯನ್ನು ತೆರೆದಿದೆ.
ಐಜ್ವಾಲ್ ದಕ್ಷಿಣ-3 ಕ್ಷೇತ್ರದಲ್ಲಿ ಎಂಎನ್ಎಫ್ನ ಎಫ್.ಲಾಲ್ನುನ್ಮಾವಿಯಾ ಅವರು ಕೃಷಿ ಸಚಿವ ಕೆ.ಎಸ್.ಥಂಗಾ ಅವರನ್ನು 2,037 ಮತಗಳಿಂದ ಪರಾಭವಗೊಳಿಸಿದ್ದಾರೆ. ಎಂಎನ್ಎಫ್ ಅಭ್ಯರ್ಥಿ,ಮಾಜಿ ವಿಧಾನಸಭಾ ಸ್ಪೀಕರ್ ಲಾಲ್ಚಾಮ್ಲಿಯಾನಾ ಅವರು ರಂಗ್ತುರೆರ್ೂ ಕ್ಷೇತ್ರದಲ್ಲಿ ಏಕೈಕ ಶಾಸಕಿ ಹಾಗೂ ಸಹಕಾರ ಸಚಿವೆ ವನ್ಲಾಲಾವಮ್ಪುಲಿ ಚ್ವಾಂಗ್ಥು ಅವರನ್ನು ಸೋಲಿಸಿದ್ದ್ದರೆ,ತುಯಿಚಾಂಗ್ ಕ್ಷೇತ್ರದಲ್ಲಿ ಮಾಜಿ ಗೃಹಸಚಿವ ಎಂಎನ್ಎಫ್ನ ತಾವ್ನ್ಲುಯಿಯಾ ಅವರು ಝಡ್ಪಿಎಂನ ಡಬ್ಲು ಛುನಾವ್ಮಾ ಅವರನ್ನು 701 ಮತಗಳಿಂದ ಪರಾಭವಗೊಳಿಸಿದ್ದಾರೆ.