ಶೋಪಿಯಾನ: ಉಗ್ರರಿಂದ ನಾಲ್ವರು ಪೊಲೀಸರ ಹತ್ಯೆ
ಶ್ರೀನಗರ, ಡಿ. 11: ಜಮ್ಮು ಹಾಗೂ ಕಾಶ್ಮೀರದ ದಕ್ಷಿಣ ಶೋಪಿಯಾನ ಜಿಲ್ಲೆಯ ಝೈನಪೋರಾ ಪ್ರದೇಶದಲ್ಲಿ ಮಂಗಳವಾರ ಉಗ್ರರು ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಪೊಲೀಸರನ್ನು ಅನೀಸ್ ಅಹ್ಮದ್, ಅಬ್ದುಲ್ ಮಜೀದ್, ಮಿರಾಜುದ್ದಿನ್ ಹಾಗೂ ಹಮೀದುಲ್ಲಾಹ್ ಎಂದು ಗುರುತಿಸಲಾಗಿದೆ.
ಈ ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ಸಂಘಟನೆ ಹೊತ್ತುಕೊಂಡಿದೆ ಹಾಗೂ ಪೊಲೀಸರಿಂದ ನಾಲ್ಕು ರೈಫಲ್ಗಳನ್ನು ಅಪಹರಿಸಿರುವುದಾಗಿ ತಿಳಿಸಿದೆ. ಝೈನಪೋರಾದಲ್ಲಿ ಅಲ್ಪಸಂಖ್ಯಾತ ಪಂಡಿತ್ ಸಮುದಾಯದ ಸದಸ್ಯರಿಗೆ ರಕ್ಷಣೆ ನೀಡಲು ರೂಪಿಸಿದ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ನಡೆಸಿದರು. ಇಲ್ಲಿದ್ದ ನಾಲ್ವರು ಪೊಲೀಸರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ಓರ್ವ ಪೊಲೀಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಪೊಲೀಸರ ರೈಫಲ್ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸೇನೆ ಹಾಗೂ ಜಮ್ಮುಕಾಶ್ಮೀರ ಪೊಲೀಸ್ನ ಉಗ್ರ ನಿಗ್ರಹ ವಿಶೇಷ ಕಾರ್ಯ ಪಡೆ ಕೇಂದ್ರ ಸಶಸ್ತ್ರ ಪಡೆಯೊಂದಿಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.