ಸಭಾಪತಿಯಾಗಿ ಕೆ. ಪ್ರತಾಪಚಂದ್ರ ಶೆಟ್ಟಿ ಆಯ್ಕೆ: ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ

ಉಡುಪಿ, ಡಿ.11: ಜಿಲ್ಲೆಯ ಹಿರಿಯ ಮುತ್ಸದ್ದಿ, ನಿಷ್ಕಳಂಕ ರಾಜಕಾರಣಿ, ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕರ್ನಾಟಕ ವಿಧಾನಪರಿಷತ್ತಿನ ನೂತನ ಸಭಾಪತಿಯಾಗಿ ಆಯ್ಕೆಗೊಂಡಿರುವುದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅತೀವ ಹರ್ಷ ವ್ಯಕ್ತಪಡಿಸಿದೆ.
ಪ್ರತಾಪಚಂದ್ರ ಶೆಟ್ಟಿ ಅವರು ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಪಕ್ಷ ಬೇಧ ಮರೆತು ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ. ನಾಲ್ಕು ಭಾರಿ ವಿಧಾನಸಭಾ ಸದಸ್ಯರಾಗಿ, ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಡಳಿತದಲ್ಲಿ ಅಪಾರ ಅನುಭವವನ್ನು ಹೊಂದಿರುವ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಅರ್ಹವಾಗಿಯೇ ಸಭಾಪತಿ ಸ್ಥಾನ ಒಲಿದು ಬಂದಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಪಾಲ ಭಂಡಾರಿ ಅಭಿನಂದನೆ: ವಿಧಾನಪರಿಷತ್‌ನ ಸಭಾಪತಿಯಾಗಿ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್ ನಾಯಕರನ್ನು ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಹೆಬ್ರಿ ಗ್ರಾಪಂ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಭಿನಂದಿಸಿದ್ದಾರೆ. ಅವರ ಸೇವಾವಧಿಯಲ್ಲಿ ಮೇಲ್ಮನೆಯ ಘನತೆ ಇನ್ನಷ್ಟು ಹೆಚ್ಚಾಗಲಿ ಎಂದವರು ಹಾರೈಸಿದ್ದಾರೆ.