ಉಡುಪಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರ ಸಹಿ ಪೋರ್ಜರಿ ಪ್ರಕರಣ; ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ನಿರಂಜನ್ ಚಿದಾನಂದ ಭಟ್
ಉಡುಪಿ, ಡಿ.12: ಒಂಭತ್ತು ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹಿಯನ್ನು ಪೋರ್ಜರಿ ಮಾಡಿ ಅವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಡಿ.10ರಂದು ತೀರ್ಪು ನೀಡಿದೆ.
ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ನಿರಂಜನ್ ಚಿದಾನಂದ ಭಟ್(37) ಶಿಕ್ಷೆಗೆ ಗುರಿಯಾದ ಆರೋಪಿ.
ಈತ ವಂಚಿಸುವ ಮತ್ತು ತಾನೆ ಭಾರತ ದೇಶದ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ಧುಲ್ ಕಲಾಂ ಎಂದು ವ್ಯವಹರಿಸಿ ರಾಷ್ಟ್ರಪತಿಗಳ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಎ.ಪಿ.ಜೆ.ಅಬ್ಧುಲ್ ಕಲಾಂರವರ ಸಹಿಯನ್ನು ನಕಲಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದನು.
ಈತ ಅಬ್ದುಲ್ ಕಲಾಂರವರಿಗೆ ಕಳುಹಿಸಿಕೊಟ್ಟ ಅಭಿನಂದನಾ ಪತ್ರಕ್ಕೆ ಉತ್ತರವಾಗಿ ಅಬ್ದುಲ್ ಕಲಾಂ ಕಳುಹಿಸಿದ್ದ ಕೃತಜ್ಞತಾ ಪತ್ರದಲ್ಲಿದ್ದ ಅವರ ಸಹಿ ಯನ್ನು ನಕಲಿ ಮಾಡಿದ್ದನು. ಉಡುಪಿ ಕರಾವಳಿ ಬೈಪಾಸ್ ಬಳಿಯ ಸರ್ಫ್ ಆ್ಯಂಡ್ ವೀವ್ ಎಂಬ ಹೆಸರಿನ ಸೈಬರ್ ಕೆಫೆಯಲ್ಲಿ ಅಬ್ದುಲ್ ಕಲಾಂ ಅವರ ಹೆಸರಲ್ಲಿ
ನಕಲಿ ಈ-ಮೇಲ್ ಐಡಿಯನ್ನು ತಯಾರಿಸಿದ ಆರೋಪಿ, ಇದರ ಮೂಲಕ ‘ಅಮೆರಿಕನ್ ಇಂಜಿನಿಯರಿಂಗ್ ಆರ್ಗನೈಸೇಶನ್’ ಇಂಜಿನಿಯರ್ಗಳಿಗೆ ನೀಡುವ ಹೂವೇರ್ ಪ್ರಶಸ್ತಿಗಾಗಿ ಆರೋಪಿಯ ನಾಮಪತ್ರವನ್ನು ಅಬ್ಧುಲ್ ಕಲಾಂ ಶಿಫಾರಸ್ಸು ಮಾಡಿರುವಂತೆ ನಂಬಿಸಿ ಕಳುಹಿಸಿದ್ದನು. ಅಲ್ಲದೆ ಅಬ್ದುಲ್ ಕಲಾಂರವರ ನಕಲಿ ಇಮೇಲ್ ಐಡಿಯಿಂದ ಗೋಸ್ವಾಮಿ ಡಿ.ಯೋಗಿ ನ್ಯೂಯಾರ್ಕ್ ಇವರಿಗೆ ಭಾರತ ದೇಶದಲ್ಲಿರುವ 50 ಎಂಡಬ್ಲ್ಯು ಸೋಲಾರ್ ಥರ್ಮಲ್ ಪ್ಲಾಂಟ್ನ ಪ್ರಾಜೆಕ್ಟ್ ರಿಪೋರ್ಟನ್ನು ಕಳುಹಿಸಿ ಕೊಡುವಂತೆ ಕೋರಿ, ತಾನು ಸೃಷ್ಠಿಸಿದ ದಾಖಲೆಗಳು ನೈಜ ದಾಖಲೆಗಳು ಎಂದು ಬಳಸಿದ್ದನು. ಈ ಮೂಲಕ ಆತ ತಾನೇ ರಾಷ್ಟ್ರಪತಿ ಅಬ್ಧುಲ್ ಕಲಾಂ ಎಂದು ವ್ಯವಹರಿಸಿ ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದನು ಎಂದು ದೂರಲಾಗಿತ್ತು.
ಈ ಬಗ್ಗೆ ಆಗಿನ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗದ ಪೊಲೀಸ್ ನಿರೀಕ್ಷಕ ಶ್ರೀನಿವಾಸ ರಾಜ್ ನೀಡಿದ ದೂರಿನಂತೆ 2009ರ ಮೇ 24ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಅದೇ ದಿನ ಬಂಧಿಸಿದ್ದರು. ಈ ಕುರಿತು ಆಗಿನ ಉಡುಪಿ ವೃತ್ತ ನಿರೀಕ್ಷಕರಾಗಿದ್ದ ಗಣೇಶ ಹೆಗ್ಡೆ ತನಿಖೆ ನಡೆಸಿದ್ದು, ನಂತರ ವೃತ್ತ ನಿರೀಕ್ಷಕ ರಾಗಿದ್ದ ಎಸ್.ವಿ.ಗಿರೀಶ್ 2010ರ ಅ.26ರಂದು ಆರೋಪಿ ವಿರುದ್ಧ ದೋಷಾ ರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್., ಸಾಕ್ಷಿದಾರರ ಸಾಕ್ಷ್ಯ, ದಾಖಲೆಗಳು ಹಾಗೂ ವಾದವನ್ನು ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಅದರಂತೆ ನ್ಯಾಯಾಧೀಶರು, ಆರೋಪಿ ನಿರಂಜನ್ ಚಿದಾನಂದ ಭಟ್ಗೆ ಭಾರತೀಯ ದಂಡ ಸಂಹಿತೆ ಕಲಂ 419, 465, 468, 469, 471ರಡಿ ಮೂರು ವರ್ಷ ಕಠಿಣ ಶಿಕ್ಷೆ ಮತ್ತು 7ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
ಸರಕಾರ ಪರವಾಗಿ ಹಿಂದಿನ ಸಹಾಯಕ ಸರಕಾರಿ ಅಭಿಯೋಜಕಿ ಹಾಗೂ ಈಗಿನ ಕಾನೂನು ಅಧಿಕಾರಿ ಕಿರಿಯ ಮಮ್ತಾಜ್ ವಿಚಾರಣೆ ನಡೆಸಿದ್ದು, ಈಗಿನ ಸಹಾಯಕ ಸರಕಾರಿ ಅಭಿಯೊೀಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.