ಶಿರೋಮಣಿ ಅಕಾಲಿದಳಕ್ಕೆ ರಾಜೀನಾಮೆ ನೀಡಿದ ಮಾಜಿ ಸೇನಾ ಮುಖ್ಯಸ್ಥ
ಚಂಡೀಗಡ,ಡಿ.12: ಮಾಜಿ ಸೇನಾ ಮುಖ್ಯಸ್ಥ ಜೆ.ಜೆ ಸಿಂಗ್ ಶಿರೋಮಣಿ ಅಕಾಲಿದಳದ ನಿವೃತ್ತ ಯೋಧರ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಪಕ್ಷವನ್ನು ತ್ಯಜಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
2017ರಲ್ಲಿ ಕಾಂಗ್ರೆಸ್ನ ಅಮರಿಂದರ್ ಸಿಂಗ್ ವಿರುದ್ಧ ಪಟಿಯಾಲಾ ಕ್ಷೇತ್ರದಿಂದ ಶಿರೋಮಣಿ ಅಕಾಲಿದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಂಗ್ ಆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಸಿಂಗ್ ಅಕಾಲಿದಳ ಅಧ್ಯಕ್ಷ ಸುಕ್ಬೀರ್ ಸಿಂಗ್ ಬಾದಲ್ಗೆ ನೀಡಿರುವ ತನ್ನ ರಾಜೀನಾಮೆ ಪತ್ರದಲ್ಲಿ ನಾನು ನನ್ನ ವೈಯಕ್ತಿಕ ಕಾರಣಗಳಿಂದ ಪಕ್ಷದ ಎಲ್ಲ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪಕ್ಷವು ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ನನಗೆ ಅಸಮಾಧಾನವಿದೆ. 2016ರಿಂದ ಪಂಜಾಬ್ನಲ್ಲಿ ನಡೆಯುತ್ತಿರುವುದನ್ನು ಕಂಡು ನನಗೆ ಭ್ರಮನಿರಸನವಾಗಿದೆ. ನನ್ನ ಈ ನಿರ್ಧಾರದಿಂದ ಜನರ ಸೇವೆ ಮಾಡುವ ನನ್ನ ಕೆಲಸದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.