ಅತಂತ್ರ ಸ್ಥಿತಿಯಲ್ಲಿ ಪುಟಾಣಿಗಳು, ಸಿಮೆಂಟ್ ಶೀಟ್ ಶೆಡ್‍ನ ತಾಪದಲ್ಲಿ ಮಕ್ಕಳು
ಪೂರ್ಣವಾಗದ ಬೆದ್ರಾಡಿ, ಜಲಧರ ಅಂಗನವಾಡಿ ಕಟ್ಟಡ ಕಾಮಗಾರಿ

ಪುತ್ತೂರು, ಡಿ. 12: ಶಾಲಾ ಪೂರ್ವ ಶಿಕ್ಷಣ ಸೇರಿದಂತೆ ಮಕ್ಕಳ ಆರೋಗ್ಯ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಅಂಗನವಾಡಿ ಕೇಂದ್ರಗಳ ಮಹತ್ವದ ಪಾತ್ರವಿದೆ. ಆದರೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಗೊಳಪಟ್ಟ ಬೆದ್ರಾಡಿ ಮತ್ತು ಜಲಧರ ಕಾಲನಿ ಎಂಬ 2 ಅಂಗನವಾಡಿ ಕಟ್ಟಡಗಳ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಇಲ್ಲಿನ ಅಂಗನವಾಡಿ ಪುಟಾಣಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಒಂದು ಅಂಗನವಾಡಿ ತಾತ್ಕಾಲಿಕ ಸಿಮೆಂಟ್ ಶೆಡ್‍ನಲ್ಲಿ ಕಾರ್ಯಾಚರಿಸುತ್ತಿದ್ದರೆ, ಜಲಧರ ಕಾಲನಿ ಅಂಗನವಾಡಿಯು ಕಾಲನಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ನೂತನ ಕಟ್ಟಡಗಳ ನಿರ್ಮಾಣವು ಪೂರ್ಣಗೊಂಡಿಲ್ಲದ ಪರಿಣಾಮವಾಗಿ ಅಂಗನವಾಡಿಯು ಇನ್ನಷ್ಟು ಸಮಯ ಇಲ್ಲೇ ಕಾರ್ಯಾಚರಿಸಬೇಕಾದ ಪರಿಸ್ಥಿತಿಯಿದೆ.
ಮೇನಾಲ ಜಲಧರ ಕಾಲನಿ ಅಂಗನವಾಡಿ ಕೇಂದ್ರವು 2007ರಂದು ಪ್ರಾರಂಭವಾಗಿದ್ದು ಪ್ರಾರಂಭದಲ್ಲಿ 8 ಮಂದಿ ಹಾಜರಾತಿಯೊಂದಿಗೆ ಆರಂಭ ಗೊಂಡಿತ್ತು. ಇದೀಗ ಈ ಕೇಂದ್ರದಲ್ಲಿ ಒಟ್ಟು 24 ಮಕ್ಕಳ ಹಾಜರಾತಿ ಇದೆ. ನೀರಿನ ವ್ಯವಸ್ಥೆ, ಗ್ಯಾಸ್ ಎಲ್ಲಾ ಇದ್ದರೂ ಪುಟಾಣಿಗಳ ಚಟುವಟಿಕೆ, ದಾಸೋಹ ಇವೆಲ್ಲವೂ ಒಂದೇ ಕೊಠಡಿಯಲ್ಲಿ ಆಗಬೇಕಾಗಿದೆ. ಎಲ್ಲಾ ಮಕ್ಕಳೂ ಕೇಂದ್ರಕ್ಕೆ ಆಗಮಿಸಿದಲ್ಲಿ ಈಗಿರುವ ಅಂಬೇಡ್ಕರ್ ಭವನದಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ನೂತನ ಅಂಗನವಾಡಿ ಕಟ್ಟಡಕ್ಕೆ ಅಂಬೇಡ್ಕರ್ ಭವನದಿಂದ ಸುಮಾರು 60 ಮೀ.ದೂರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಕಟ್ಟಡದ ಅಡಿಪಾಯ ಕಾರ್ಯ ಮಾತ್ರ ನಡೆದಿದೆ. ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡರೆ ಪುಟಾಣಿಗಳಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೆ ಅಂಗನವಾಡಿ ಕೇಂದ್ರಕ್ಕೆ ಸಮರ್ಪಕವಾದ ರಸ್ತೆ ಅಭಿವೃದ್ಧಿಯೂ ಆಗಬೇಕಿದೆ.
ಇನ್ನೊಂದೆಡೆ ಕರ್ನೂರುಗುತ್ತು ಬೆದ್ರಾಡಿ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 14 ಮಂದಿ ಮಕ್ಕಳಿದ್ದು, ಕಳೆದ ಒಂದುವರೆ ವರ್ಷದ ಹಿಂದೆ ಅಂಗನವಾಡಿ ಕೇಂದ್ರ ದಿಂದ ಸುಮಾರು 200ಮೀ.ದೂರದಲ್ಲಿರುವ ತಾತ್ಕಾಲಿಕ ಸಿಮೆಂಟ್ ಶೆಡ್‍ನಲ್ಲಿ ಕಾರ್ಯಾಚರಿಸುತ್ತಿದೆ. ಕೇಂದ್ರದ ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದ ಕಾರಣ ನೂತನ ಕಟ್ಟಡಕ್ಕೆ ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದ್ದರು. ನಬಾರ್ಡ್ ಯೋಜನೆಯಲ್ಲಿ ಒಟ್ಟು ಸುಮಾರು ರೂ. 14 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಕಾಮಗಾರಿ ನಡೆದಿದೆ. ಬೆದ್ರಾಡಿ ಅಂಗನವಾಡಿ ಕೇಂದ್ರವು ಖಾಸಗಿ ಸ್ಥಳದಲ್ಲಿ ದಾನಿಯೊಬ್ಬರು ಸಿಮೆಂಟ್ ಶೀಟ್ ಆಳವಡಿಸಿದ ಶೆಡ್ ನೀಡಿದ್ದು ಇದರಲ್ಲಿ ಕಾರ್ಯಾಚರಿಸುತ್ತಿದೆ. ಮಕ್ಕಳು ಶೌಚಾಲಯಕ್ಕಾಗಿ ಸಮೀಪದ ಮನೆಯನ್ನು ಅವಲಂಬಿಸಬೇಕಾಗಿದೆ. ಇಲ್ಲಿ ಮಕ್ಕಳ ಆಹಾರ ದಾಸ್ತಾನಿರಿಸಲು ಸಮರ್ಪಕವಾದ ವ್ಯವಸ್ಥೆಗಳಿಲ್ಲ. ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಸಿಮೆಂಟ್ ಶೀಟ್‍ನ ಮೂಲಕ ಸೆಖೆ ಹೆಚ್ಚುತ್ತಿದೆ. ಡಾಮರು ರಸ್ತೆಯಿಂದ ಶೆಡ್‍ಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲದೇ ಪೊದರು ತುಂಬಿದ ರಸ್ತೆಯಲ್ಲೇ ಬರಬೇಕಾಗಿದೆ. ಅಂಗನವಾಡಿಗೆ ಆಹಾರದ ಪೊಟ್ಟಣ, ಗ್ಯಾಸ್‍ನ್ನು ಹೊತ್ತುಕೊಂಡೇ ಸಾಗಬೇಕಾಗಿದೆ. ಮುಂಬರುವ ಮಳೆಗಾಲಕ್ಕೆ ಮೊದಲು ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಜಲಧರ ಕಾಲನಿ ಮತ್ತು ಬೆದ್ರಾಡಿ ಅಂಗನವಾಡಿ ಕೇಂದ್ರದ ಸಮಸ್ಯೆಗಳ ಬಗ್ಗೆ ನೆ.ಮುಡ್ನೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾವಿಸಿದ್ದರು. ಜಮಾಬಂಧಿ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಇತ್ತೀಚಿಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪವಾಗಿ ಗಮನ ಸೆಳೆಯಲಾಗಿತ್ತು. ಗ್ರಾಮ ಪಂಚಾಯತ್ ಸಮಾನ್ಯ ಸಭೆಗಳಲ್ಲೂ ಈ ಬಗ್ಗೆ ಪ್ರಸ್ತಾಪಗೊಂಡಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.
ಬೆದ್ರಾಡಿ ಅಂಗನವಾಡಿ ಕೇಂದ್ರದ ಪಂಚಾಯತ್‍ನ ಕೆಲಸ ಉದ್ಯೋಗ ಖಾತರೀ ಮೂಲಕ ಮುಗಿದಿದ್ದು ಇದನ್ನು ನಿರ್ಮಿತಿ ಕೇಂದ್ರ ಹಸ್ತಾಂತರಿಸ ಬೇಕಾಗಿದೆ. ಆದರೆ ಕೆಲವೊಂದು ತಾಂತ್ರಿಕ ತೊಂದರೆಯಿಂದ ಹಸ್ತಾಂತರ ವಿಳಂಬವಾಗಿದ್ದು ಶೀಘ್ರದಲ್ಲೇ ಹಸ್ತಾಂತರ ಕಾರ್ಯ ನಡೆಯಲಿದೆ. ಜಲಧರ ಕಾಲನಿಯಲ್ಲಿ ರೂ.8 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆಗಬೇಕಾಗಿದ್ದು ಈಗಾಗಲೇ ಸಮತಟ್ಟು ಆಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
-ಶ್ರೀರಾಮ್ ಪಕ್ಕಳ, ಉಪಾಧ್ಯಕ್ಷರು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ಅಂಗನವಾಡಿ ಕಟ್ಟಡದ ಬಗ್ಗೆ ಜಿಪಂ ಕೆಡಿಪಿ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡಿದ್ದೇನೆ. ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಲಾಗಿದೆ.
-ಅನಿತಾ ಹೇಮನಾಥ ಶೆಟ್ಟಿ, ಅಧ್ಯಕ್ಷರು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಿ ಸಮಿತಿ