ಫರಂಗಿಪೇಟೆ ಮೀನು ಮಾರುಕಟ್ಟೆ ತೆರವು ಕಾರ್ಯಾಚರಣೆ: ವ್ಯಾಪಾರಸ್ಥರ ವಿರೋಧ

ಬಂಟ್ವಾಳ, ಡಿ.13: ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮೀನು ಮಾರುಕಟ್ಟೆ ಹಾಗೂ ವಿವಿಧ ಅಂಗಡಿಗಳನ್ನು ತೆರವುಗೊಳಿಸಲು ಇಂದು ಬೆಳಗ್ಗೆ ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಫರಂಗಿಪೇಟೆ ಮೀನು ಮಾರುಕಟ್ಟೆ ಇರುವ ಸ್ಥಳ ರೈಲ್ವೆ ಇಲಾಖೆಗೆ ಸೇರಿದ್ದೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಮೀನು ಮಾರುಕಟ್ಟೆ ಸೇರಿದಂತೆ, ಕೋಳಿ ಮಾಂಸದ ಹಾಗೂ ಇತರ ಅಂಗಡಿಗಳನ್ನು ಸ್ವಯಂ ತೆರವುಗೊಳಿಸಲು ವ್ಯಾಪಾರಿಗಳಿಗೆ ರೈಲ್ವೆ ಅಧಿಕಾರಿಗಳು ಒಂದು ವಾರದ ಗಡುವು ವಿಧಿಸಿದ್ದರು. ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಬಲವಂತದ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಬುಲ್ಡೋಝರ್ ಹಾಗೂ ಪೊಲೀಸ್ ಭದ್ರತೆಯೊಂದಿಗೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ವ್ಯಾಪಾರಸ್ಥರು ಹಾಗೂ ಸ್ಥಳೀಯ ಗ್ರಾಪಂ ಅಧ್ಯಕ್ಷ ರಮ್ಲಾನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಗೊಂದಲದ ಹಿನ್ನೆಲೆಯಲ್ಲಿ ಸ್ವಯಂ ತೆರವುಗೊಳಿಸಲು ವ್ಯಾಪಾರಸ್ಥರಿಗೆ ಇನ್ನೂ ಒಂದು ಗಂಟೆಗಳ ಕಾಲಾವಧಿಯನ್ನು ರೈಲ್ವೆ ಅಧಿಕಾರಿಗಳು ನೀಡಿದ್ದಾರೆ. ಬಳಿಕ ಕೆಲವು ವ್ಯಾಪಾರಸ್ಥರು ಸ್ವಯಂ ತೆರವಿಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ರಸ್ತೆಯಲ್ಲಿ ವ್ಯಾಪಾರ ನಡೆಸುವ ಮೂಲಕ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ.
ಒಟ್ಟಾರೆಯಾಗಿ ಫರಂಗಿಪೇಟೆ ಮೀನು ಮಾರುಕಟ್ಟೆ ಸದ್ಯ ಗೊಂದಲದ ಗೂಡಾಗಿದ್ದು, ವ್ಯಾಪಾರಿಗಳು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ತಿಕ್ಕಾಟ ಮುಂದುವರಿದಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಹಾಗೂ ಸಿಬ್ಬಂದಿ ಆಗಮಿಸಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.