ಮಂಗಳೂರು: ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ- ಮಾರಾಟ ಉದ್ಘಾಟನೆ

ಮಂಗಳೂರು, ಡಿ.13: ಮೈಸೂರು ಸಿಲ್ಕ್ ಸೀರೆಗಳು ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಸೊಬಗು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯಿಸಿದ್ದಾರೆ.
ಮಹಾನಗರ ಪಾಲಿಕೆ ಕಚೇರಿ ಬಳಿಯ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ವತಿಯಿಂದ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಇಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೇಷ್ಮೆ ಸೀರೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಒಂದು ಕಾಲದಲ್ಲಿ ರಾಜ ಮನೆತನದವರಿಗೆ ಮಾತ್ರ ಸೀಮಿತವಾಗಿದ್ದ ಮೈಸೂರು ರೇಷ್ಮೆ ಸೀರೆಗಳು ಇಂದು ಜನಸಾಮಾನ್ಯರಿಗೂ ಮಿತವ್ಯಯದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಕರ್ನಾಟಕ ರೇಷೆ,್ಮ ಉದ್ಯಮಗಳ ನಿಗಮ ರಿಯಾಯಿತಿ ದರದಲ್ಲಿ ಮಾರಾಟವನ್ನು ನಡೆಸುತ್ತಿದೆ ಎಂದರು.
ಈ ಸಂದರ್ಭ ಕ್ರೇಪ್ ಸಿಲ್ಕ್‌ನಲ್ಲಿ ಬುಟ್ಟಾ ವಿನ್ಯಾಸದಿಂದ ಕೂಡಿದ 70,000 ರೂ. ವೌಲ್ಯದ ಸೀರೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ವಾರ್ತಾಧಿಕಾರಿ ಖಾದರ್ ಶಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ನಿಗಮದ ಮಾರುಕಟ್ಟೆ ವ್ಯವಸ್ಥಾಪಕ ಭಾನುಪ್ರಕಾಶ್ ಎಸ್. ಮಾತನಾಡಿ, ಜರಿರಹಿತ ಮೈಸೂರು ಸಿಲ್ಕ್ ಸೀರೆಗಳು 5,700 ರೂ.ಗಳಿಂದ ಲಭ್ಯವಿದ್ದು, ಜರಿಯಿಂದ ಕೂಡಿದ ಸೀರೆಗಳು 14,000 ರೂನಿಂದ 1.23 ಲಕ್ಷ ರೂ.ವರೆಗಿನ ಸೀರೆಗಳು ಲಭ್ಯವಿದೆ ಎಂದರು.
ಮೈಸೂರು ಸಿಲ್ಕ್ ಸೀರಿಗೆ ಉಪಯೋಗಿಸಲ್ಪಡುವ ರೇಷ್ಮೆಯು ಪರಿಶುದ್ಧವಾಗಿದ್ದು, ಜರಿಯು ಪರಿಶುದ್ಧ ಬೆಳ್ಳಿ ಹಾಗೂ ಚಿನ್ನದ ಲೇಪನದಿಂದ ಕೂಡಿರುತ್ತದೆ. (ಶೇ. 0.65 ಚಿನ್ನ ಹಾಗೂ ಶೇ. 65 ಬೆಳ್ಳಿಯದ್ದಾಗಿದೆ). ಕೆಎಸ್‌ಐಸಿಯ ಮೈಸೂರು ಸಿಲ್ಕ್ ಸೀರೆಗಳು ಭೌಗೋಳಿಕ ಗುರುತಿನ ನೋಂದಣಿ ಜಿಐ-11 ಪಡೆದುಕೊಂಡಿವೆ. ನಿಗಮಕ್ಕೆ 2016-17ನೆ ಸಾಲಿನ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಪ್ರದಾನ ಮಾಡಲಾಗುವ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಲಭ್ಯವಾಗಿದೆ ಎಂದು ಹೇಳಿದರು.
ಕೆಎಸ್‌ಐಸಿಯಲ್ಲಿ ಮಾತ್ರ ಅಪ್ಪಟ ಮೈಸೂರು ಸಿಲ್ಕ್ ಸೀರೆಗಳು ಲಭ್ಯ
ಪ್ರತೀ ವರ್ಷವೂ ರೇಷ್ಮೆಯಲ್ಲಿ ವಿಭಿನ್ನ ವಿನ್ಯಾಸ ಹಾಗೂ ವೌಲ್ಯವರ್ಧಿತ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನವನ್ನು ಕೆಎಸ್ ಐಸಿ ಮಾಡುತ್ತಿದೆ. 106 ವರ್ಷಗಳ ಇತಿಹಾಸವನ್ನು ಹೊಂದಿರುವ ಕೆಎಸ್‌ಐಸಿಯ ಉತ್ಪನ್ನಗಳು ಇತರ ಯಾವುದೇ ಮಳಿಗೆಯಲ್ಲಿ ಲಭ್ಯವಿರುವುದಿಲ್ಲ. ಈ ರೀತಿಯ ಪ್ರದರ್ಶನ ಅಥವಾ ಕೆಎಸ್‌ಐಸಿಯ ಮಳಿಗೆಗಳಲ್ಲಿ ಮಾತ್ರವೇ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ. ಮೈಸೂರು ಸಿಲ್ಕ್ ಸೀರೆಗಳಲ್ಲಿ ಉಪಯೋಗಿಸುವ ರೇಷ್ಮೆ ಅಪ್ಪಟವಾಗಿದ್ದು, ಗ್ರಾಹಕರಿಗೆ ಯಾವುದೇ ಅಉಮಾನ ಬೇಡ.
-ಭಾನುಪ್ರಕಾಶ್, ಮಾರುಕಟ್ಟೆ ವ್ಯವಸ್ಥಾಪಕರು, ಕೆಎಸ್‌ಐಸಿ