'ಈಡಿಯಟ್' ಎಂದು ಸರ್ಚ್ ಮಾಡಿದರೆ ಟ್ರಂಪ್ ಫೋಟೊ ಯಾಕೆ ಬರುತ್ತೆ?
ಅಮೆರಿಕನ್ ಕಾಂಗ್ರೆಸ್ ನಲ್ಲಿ ಗೂಗಲ್ ಸಿಇಒ ಸುಂದರ್ ಗೆ ಪ್ರಶ್ನೆ: ಅವರ ಉತ್ತರವೇನು?
ವಾಷಿಂಗ್ಟನ್, ಡಿ.13: “ಈಡಿಯಟ್ ಎಂಬ ಇಂಗ್ಲಿಷ್ ಪದ ಟೈಪ್ ಮಾಡಿ ಗೂಗಲ್ ಇಮೇಜ್ ಸರ್ಚ್ ಒತ್ತಿದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳೇಕೆ ಕಾಣಿಸುತ್ತವೆ?” ಹೀಗೊಂದು ಪ್ರಶ್ನೆಯನ್ನು ಕ್ಯಾಲಿಫೋರ್ನಿಯಾದ ಡೆಮಾಕ್ರೆಟಿಕ್ ಪಕ್ಷದ ಸಂಸದ ರೆಪ್. ಝೋ ಲೋಫ್ಗ್ರೆನ್ ಅವರು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೇಳಿದರು. ಅಮೆರಿಕಾದ ಸೆನೇಟಿನ ಹೌಸ್ ಜುಡಿಶಿಯರಿ ಕಮಿಟಿಯಲ್ಲಿ ಪಿಚೈ ಅವರು ಎದುರಿಸಿದ ಕೆಲವು `ಗೂಗ್ಲಿ' ಪ್ರಶ್ನೆಗಳಲ್ಲಿ ಇದು ಒಂದಾಗಿತ್ತು.
ಮೇಲಿನ ಪ್ರಶ್ನೆಗೆ ಪಿಚೈ ನೀಡಿದ ಉತ್ತರ ಹೀಗಿತ್ತು. “ನಾವು ಕೀವರ್ಡ್ ತೆಗೆದು ಅದನ್ನು ಆ ಕೀವರ್ಡ್ ಹೊಂದಿದ ಪುಟಗಳಿಗೆ ಹೋಲಿಸಿ ನಂತರ 200ಕ್ಕೂ ಹೆಚ್ಚು ಸಿಗ್ನಲ್ ಆಧಾರದಲ್ಲಿ ಅದಕ್ಕೆ ರ್ಯಾಂಕಿಂಗ್ ನೀಡುತ್ತೇವೆ. ಪ್ರಸ್ತುತತೆ, ಹೊಸ ಸುದ್ದಿ, ಜನಪ್ರಿಯತೆ, ಜನರು ಈ ಕೀವರ್ಡ್ ಹೇಗೆ ಬಳಸುತ್ತಾರೆ ಇವುಗಳನ್ನೆಲ್ಲಾ ಪರಿಗಣಿಸಲಾಗುತ್ತದೆ. ಈ ಆಧಾರದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ನಾವು ಒಂದು ಸರ್ಚ್ ಪ್ರಶ್ನೆಗೆ ಆ ಸಂದರ್ಭದ ಅತ್ಯುತ್ತಮ ಫಲಿತಾಂಶ ಒದಗಿಸುತ್ತೇವೆ''.
ಅಂದರೆ ಜನರು ನಿರ್ದಿಷ್ಟ ಕೀವರ್ಡ್ ಗಳನ್ನು ಅದಕ್ಕೆ ಹೊಂದಿಕೆಯಾಗುವ ಸುದ್ದಿ ಅಥವಾ ಸೈಟ್ಗಳ ಜತೆ ಜೋಡಿಸಿದಾಗ ಹೀಗಾಗುತ್ತದೆ.
ಇಯೋವಾದ ಕಾಂಗ್ರೆಸ್ಸಿಗ (ರಿಪಬ್ಲಿಕನ್) ಸ್ಟೀವ್ ಕಿಂಗ್ ಅವರು ಕೇಳಿದ ಪ್ರಶ್ನೆ ಸ್ವಾರಸ್ಯಕರವಾಗಿತ್ತು. ತಮ್ಮ ಏಳು ವರ್ಷದ ಮೊಮ್ಮಗಳ ಐಫೋನ್ ಯಾವತ್ತೂ ಆಕೆಯ ತಾತನ (ಸ್ಟೀವ್) ಚುನಾವಣೆಯ ಮುಂಚಿನ ಚಿತ್ರ ಹಾಗೂ ಅದರ ಸುತ್ತ ಅಸಂಬದ್ಧ ಭಾಷೆಯಲ್ಲಿನ ಬರಹಗಳನ್ನು ಏಕೆ ತೋರಿಸುತ್ತದೆ ಎಂದು ಅವರು ಕೇಳಿದಾಗ, “ಆ ಐಫೋನನ್ನು ಬೇರೆ ಕಂಪೆನಿ ತಯಾರಿಸಿದೆ'' ಎಂದು ನಗೆಗಡಲ ನಡುವೆ ಪಿಚೈ ಹೇಳಿದರು.
ಇನ್ನೊಬ್ಬ ರಿಪಬ್ಲಿಕನ್ ಟೆಡ್ ಪೋ ಅವರ ಪ್ರಶ್ನೆ ಹೀಗಿತ್ತು- “ನಾನು ಈಗ ಕುಳಿತಲ್ಲಿಂದ ಎದ್ದು ಆ ಮೂಲೆ ತನಕ ನಡೆದರೆ ಗೂಗಲ್ ಸಂಸ್ಥೆಯಲ್ಲಿ ಯಾರಿಗಾದರೂ ನಾನು ಅಲ್ಲಿ ತನಕ ಹೋಗಿರುವುದು ತಿಳಿಯುತ್ತದೆಯೇ?''
ಲೊಕೇಶನ್ ಟ್ರ್ಯಾಕಿಂಗ್ ಹೇಗೆ ಕೆಲಸ ಮಾಡುತ್ತದೆ ಎಂದು ಪಿಚೈ ವಿವರಿಸಲು ಆರಂಭಿಸಿದಾಗ ಅವರನ್ನು ತಡೆದ ಟೆಡ್ ``ನೋಡಿ, ಇದು ಕಠಿಣ ಪ್ರಶ್ನೆಯಲ್ಲ. ನೀವು ವರ್ಷಕ್ಕೆ 100 ಮಿಲಿಯನ್ ಡಾಲರ್ ಮಾಡುತ್ತೀರಿ. ನೀವು ನನ್ನ ಪ್ರಶ್ನೆಗೆ ಉತ್ತರಿಸಬಲ್ಲಿರಿ. ಆದರೆ ಈ ಫೋನ್ ಮೂಲಕ ನಾನು ಅಲ್ಲಿಗೆ ಹೋಗಿ ಮಿಸ್ಟರ್ ಜಾನ್ಸನ್ ಪಕ್ಕ ಕುಳಿತಿದ್ದೇನೆಂದು ಗೂಗಲ್ಗೆ ತಿಳಿಯುತ್ತದೆಯೇ?'' ಎಂದು ಕೇಳಿದಾಗ ಪಿಚೈ ಅವರ ಉತ್ತರ ಸರಳವಾಗಿತ್ತು- ``ಐಫೋನ್ ನೋಡದೆ ಆ ಪ್ರಶ್ನೆಗೆ ನಾನು ಉತ್ತರಿಸಲು ಸಾಧ್ಯವಿಲ್ಲ.''