ಬ್ಯಾಂಕ್‌ಗಳನ್ನು ಲೂಟಿಕೋರರಿಂದ ರಕ್ಷಿಸಲು ಹೋರಾಟ ಅಗತ್ಯ: ಡಾ.ಭಾಸ್ಕರ ಮಯ್ಯ

ಉಡುಪಿ, ಡಿ.13: ಜಾಗತಿಕ ಹಣಕಾಸು ಬಂಡವಾಳ ಇಂದು ದೇಶದ ಆರ್ಥಿಕ ಕ್ಷೇತ್ರದೊಳಗೆ ನುಗ್ಗಿದೆ. ಇದರಿಂದಾಗಿ ಬ್ಯಾಂಕಿಗೆ ಇರುವ ಸಾಮಾಜಿಕ ಬದ್ಧತೆಯೂ ಒಂದೊಂದಾಗಿ ಕಳಚಿಕೊಳ್ಳುತ್ತಿದೆ ಎಂದು ಹಿರಿಯ ಚಿಂತಕ, ವಿಮರ್ಶಕ ಮತ್ತು ಲೇಖಕ ಡಾ.ಜಿ.ಭಾಸ್ಕರ ಮಯ್ಯ ಹೇಳಿದ್ದಾರೆ.
ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಕರ್ನಾಟಕ ಇದರ ಆಶ್ರಯದಲ್ಲಿ ಕೆನರಾ ಬ್ಯಾಂಕ್ ಸ್ಟಾಫ್ ಯೂನಿಯನ್ ಸಹಯೋಗದೊಂದಿಗೆ ಬನ್ನಂಜೆ ಶಿವಗಿರಿ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾದ ‘ಕಾರ್ಪೊರೇಟ್ ಲೂಟಿಕೋರರಿಂದ ಸಾರ್ವಜನಿಕ ಬ್ಯಾಂಕ್‌ಗಳನ್ನು ರಕ್ಷಿಸಿರಿ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ನಗರದಲ್ಲಿದ್ದ ಬ್ಯಾಂಕ್‌ಗಳು ಶ್ರೀಮಂತರ ಬೇಕು ಬೇಡಗಳಿಗೆ ಸೀಮಿತ ವಾಗಿತ್ತು. ಅದಕ್ಕಾಗಿ 1969ರಲ್ಲಿ ಎಡಪಕ್ಷಗಳ ಒತ್ತಡ ಹಾಗೂ ಸಮಾಜವಾದದ ಚಿಂತನೆಗಳ ಪ್ರಭಾವದಿಂದ 14 ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಯಿತು. ಅಂದಿ ನಿಂದ ಬ್ಯಾಂಕ್‌ಗಳು ವಿಶಾಲವಾಗಿ ಬೆಳೆದು ಗ್ರಾಮಾಂತರಕ್ಕೆ ವಿಸ್ತಾರಗೊಂಡವು. ಆದರೆ ಇಂದಿನ ಕೇಂದ್ರದ ಧೋರಣೆಯು ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡು ತ್ತಿದೆ ಎಂದು ಅವರು ಟೀಕಿಸಿದರು.
ಐಎಂಎಫ್, ಜಾಗತಿಕ ಬ್ಯಾಂಕ್, ವರ್ಲ್ಡ್ ಟ್ರೇಡ್ ಸೆಂಟರ್‌ಗಳ ಆದೇಶ ದಂತೆ ಭಾರತ ಸರಕಾರ ಕುಣಿಯುತ್ತಿದೆ. ಬ್ಯಾಂಕ್‌ಗಳನ್ನು ಜನಸಾಮಾನ್ಯರ ಕೈಗೆ ಎಟುಕದಂತೆ ಮಾಡಲಾಗುತ್ತಿದೆ. ಜನರನ್ನು ಪ್ರತಿಭಟಿಸದಂತೆ ವಿಭಜಿಸಲಾಗು ತ್ತಿದೆ. ಆದುದರಿಂದ ಬ್ಯಾಂಕ್‌ಗಳನ್ನು ಈ ಲೂಟಿಕೋರರಿಂದ ರಕ್ಷಿಸಲು ಶಕ್ತವಾದ ಪ್ರತಿಭಟನೆ ಅಗತ್ಯವಾಗಿದೆ. ಇದಕ್ಕಾಗಿ ಜನ ಸಿದ್ಧರಾಗಬೇಕು ಎಂದು ಅವರು ಹೇಳಿದರು.
ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಎಂ.ಆರ್.ಶೆಣೈ ಮಾತನಾಡಿ, ದೇಶದ ಶ್ರೀಮಂತ ಉದ್ಯಮಿಗಳು ಬ್ಯಾಂಕಿನಿಂದ ಪಡೆದ ಸಾಲ ಸರಿಯಾಗಿ ಮರು ಪಾವತಿಸದೆ ಸುಮಾರು 10.25ಲಕ್ಷ ಕೋಟಿ ರೂ. ಕೆಟ್ಟ ಸಾಲಗಳಿವೆ. ಅದರಲ್ಲಿ 5 ಕೋಟಿಗಿಂತ ಹೆಚ್ಚು ಸಾಲ ಪಡೆದವರ ಪಾಲು ಶೇ.85.6ರಷ್ಟಿದೆ. ಅವರ ಮೇಲೆ ವಸೂಲಾತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಬದಲು ದೇಶ ಬಿಟ್ಟು ಪಲಾಯನ ಮಾಡಲು ಸರಕಾರ ಅನುವು ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಬ್ಯಾಂಕ್‌ಗಳು ನಷ್ಟದಲ್ಲಿ ಬರುವಂತೆ ಮಾಡಿ ಕೊನೆಗೆ ಅಂಬಾನಿ, ಅದಾನಿಯಂತವರಿಗೆ ಮಾರಿ ಖಾಸಗೀಕರಣ ಮಾಡುವ ದೊಡ್ಡ ಹುನ್ನಾರ ನಡೆಯುತ್ತಿದೆ. ಅದಕ್ಕೆ ವಿರುದ್ಧವಾಗಿ ಯುಎಫ್‌ಬಿಯ ಕರೆ ಯಂತೆ ಜಿಸಿಟಿಯು ನೇತೃತ್ವದಲ್ಲಿ ಜ.8 ಮತ್ತು 9ರಂದು ದೇಶದಾದ್ಯಂತ ನಡೆ ಯುವ ಅಖಿಲ ಭಾರತ ಮುಷ್ಕರದಲ್ಲಿ ಬ್ಯಾಂಕ್ ನೌಕರರು ಭಾಗಿಯಾಗಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆಯನ್ನು ಫೆಡರೇಶನ್ ಉಪಾಧ್ಯಕ್ಷ ಬಿ.ಎಂ.ಮಾಧವ ವಹಿಸಿದ್ದರು. ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್ ರಾಜ್ ವಂದಿಸಿದರು. ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು.