ದಲಿತ ಅಟೋ, ಕಾರು ಚಾಲಕರಿಗೆ ಯೂನಿಯನ್‌ಗಳಿಂದ ದೌರ್ಜನ್ಯ: ದಸಂಸ ಖಂಡನೆ
ಉಡುಪಿ, ಡಿ.13: ದಲಿತ ಯುವಕರು ಪ್ರವಾಸೋದ್ಯಮ ಇಲಾಖೆ ಹಾಗೂ ಬ್ಯಾಂಕ್‌ಗಳಿಂದ ಸಾಲ ಮಾಡಿ ಪಡೆದಿರುವ ಅಟೋ ಮತ್ತು ಕಾರುಗಳನ್ನು ಉಡುಪಿ ನಗರ, ಮಣಿಪಾಲ ಮತ್ತು ಇತರ ಕಡೆಗಳ ನಿಲ್ದಾಣಗಳಲ್ಲಿ ನಿಲ್ಲಿಸಲು ಅವಕಾಶ ನೀಡದೆ ಅಸ್ಪಶ್ಯತೆ ಹಾಗೂ ದೌರ್ಜನ್ಯ ಎಸಗುತ್ತಿರುವ ಯೂನಿಯನ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಒತ್ತಾಯಿಸಿದ್ದಾರೆ.
ನಗರಗಳಲ್ಲಿರುವ ಅಟೋ ಹಾಗೂ ಕಾರು ನಿಲ್ದಾಣಗಳನ್ನು ಸರಕಾರದ ಅನು ದಾನಗಳಿಂದ ನಿರ್ಮಿಸಿದ್ದರೂ ಯೂನಿಯನ್ ಮುಖಂಡರು ತಮ್ಮ ಸ್ವಂತ ಆಸ್ತಿ ಯಂತೆ ವರ್ತಿಸುತ್ತಿದ್ದಾರೆ. ದಲಿತ ಚಾಲಕರಿಗೆ ಸದಸ್ಯರಾಗಲು ಬಿಡದೆ 5ರಿಂದ 10ಸಾವಿರ ರೂ. ವಂತಿಗೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವೌನ ವಹಿಸಿರುವುದರಿಂದ ಅವರು ಕೂಡ ಯೂನಿಯನ್‌ಗಳೊಂದಿಗೆ ಶಾಮೀಲಾಗಿದ್ದಾರೆಂಬ ಸಂಶಯ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.
ಯಾವುದೇ ವಂತಿಗೆ ವಸೂಲಿ ಮಾಡದೆ ದಲಿತ ಚಾಲಕರಿಗೆ ನಿಲ್ದಾಣಗಳಲ್ಲಿ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ನಿರ್ಲಕ್ಷ ತೋರಿದರೆ ಪ್ರತಿಭಟನೆ ನಡೆ ಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.





