ಬೆಂಗಳೂರು: ಮಗ ಗೃಹಿಣಿಯೊಂದಿಗೆ ಪರಾರಿ; ಆತ್ಮಹತ್ಯೆಗೆ ಶರಣಾದ ಪೋಷಕರು

ಬೆಂಗಳೂರು,ಡಿ.13: ತಮ್ಮ ಮಗ ಗೃಹಿಣಿಯೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಪೋಷಕರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರದ ಕಲ್ಲಿಗೌಡನದೊಡ್ಡಿಯಲ್ಲಿ ನಡೆದಿದೆ.
ಕಲ್ಲಿನಗೌಡನದೊಡ್ಡಿಯ ಕೃಷಿಕ ದಂಪತಿ ಸಿದ್ದರಾಜು(52) ಹಾಗೂ ಸಾಕಮ್ಮ(42) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ. ಇವರ ಮಗ ಮನು ಎಂಬಾತ ಅದೇ ಗ್ರಾಮದ ಪಲ್ಲವಿಯೆಂಬ ಗೃಣಿಯನ್ನು ಪ್ರೀತಿಸಿ ಕರೆದುಕೊಂಡು ಓಡಿಹೋಗಿದ್ದಾನೆ. ಗೃಣಿಯ ಕುಟುಂಬಸ್ಥರು ಮನು ಮನೆಯ ಮುಂದೆ ರಾತ್ರಿ ಗಲಾಟೆ ಮಾಡಿ ಸಿದ್ದರಾಜು, ಸಾಕಮ್ಮನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಟ್ರ್ಯಾಕ್ಟರ್ ಚಾಲಕನಾಗಿದ್ದ ಮನು ನಾಲ್ಕು ವರ್ಷಗಳಿಂದ ಪಲ್ಲವಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಜಾತಿಯ ಕಾರಣಕ್ಕೆ ಪಲ್ಲವಿಯ ಮನೆಯವರು ಕಳೆದ ಎರಡು ವರ್ಷಗಳ ಹಿಂದೆ ಪಲ್ಲವಿಯನ್ನು ಬೇರೆಯವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆ ದಂಪತಿಗಳಿಗೆ ಎರಡು ವರ್ಷದ ಮಗುವೂ ಇದೆ. ಎಷ್ಟು ವಿರೋಧ ಮಾಡಿದರೂ ಇಬ್ಬರೂ ಸರಿ ಹೋಗಿರಲಿಲ್ಲ. ಅಲ್ಲದೆ, ಮನೆಯವರ ಕಿರುಕುಳವೂ ಹೆಚ್ಚಿದರಿಂದ ಇಬ್ಬರೂ ಮನೆಯಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಕೊಡೀಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







