ಬೆಂಗಳೂರು: ಹಳೆ ನೋಟು ದಂಧೆ; ನಾಲ್ವರ ಸೆರೆ

ಬೆಂಗಳೂರು,ಡಿ.13: ಕೇಂದ್ರ ಸರಕಾರ ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಎರಡು ವರ್ಷಗಳು ಕಳೆಯುತ್ತಿದ್ದರೂ ನಗರದಲ್ಲಿ ಹಳೇ ನೋಟು ಬದಲಾವಣೆ ದಂಧೆ ಇಂದಿಗೂ ಮುಂದುವರಿದಿದ್ದು, ಹಳೇ ನೋಟು ಬದಲಾವಣೆ ಮಾಡುತ್ತಿದ್ದ ಗ್ಯಾಂಗನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ನಂದಿನಿ ಲೇಔಟ್‌ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಲ್ಲಿನ ರಮೇಶ್, ಸಕಾರಕ್, ಪ್ರಕಾಶ್, ವೆಂಕಟರಾಮ್ ಎಂಬಾತರನ್ನು ಬಂಧಿಸಿದ್ದು, ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಹಳೇ ನೋಟು ತಂದಿದ್ದ ನಾಲ್ವರು ಶೇ.20ರಷ್ಟು ಕಮೀಷನ್‌ಗೆ ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯುತ್ತಿದ್ದರು. ನೋಟು ಬದಲಾವಣೆ ದಂಧೆ ಮಾಡುತ್ತಿದ್ದ ಆರೋಪಿಗಳು ಬಿಜೆಪಿ ಸರಕಾರದ ಅವಧಿ ಮುಗಿದ ಬಳಿಕ ಮತ್ತೆ ಹಳೇ ನೋಟು ಚಲಾವಣೆಗೆ ಬರಲಿದೆ ಎಂದು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು.
ಈಗಾಗಲೇ ಹಲವು ಮಂದಿಗೆ ಇದೇ ರೀತಿ ಹೇಳಿ ಮೋಸ ಮಾಡಿದ್ದ ಈ ಗ್ಯಾಂಗ್, ಹಳೆ ನೋಟುಗಳನ್ನು ತೆಗೆದುಕೊಳ್ಳಲು ಸಾಕಷ್ಟು ಗಿರಾಕಿಗಳನ್ನು ಹೊಂದಿದ್ದರು. ನಗರದ ನಂದಿನಿ ಲೇಔಟ್ ಬಸ್ ನಿಲ್ದಾಣದ ಬಳಿ 1,95 ಕೋಟಿ ರೂ. ಹಣ ಬದಲಾವಣೆಗಾಗಿ ಕಾದು ಕುಳಿತಿದ್ದ ವೇಳೆ ಖಚಿತ ಮಾತಿ ಪಡೆದ ಪೊಲೀಸರು ನಗದು ಸಮೇತ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಈ ಗ್ಯಾಂಗಿನ ಪ್ರಮುಖ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.





