ಎಸ್ಸೆಸ್ಸೆಫ್ ಅಡ್ಡೂರು: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ವಿಟ್ಲ, ಡಿ. 13: ಸಂಕಷ್ಟದಲ್ಲಿರುವ ವ್ಯಕ್ತಿಗಳ ಅತ್ಯಾವಶ್ಯಕತೆಗಳನ್ನು ಪೂರೈಸಿಕೊಡುವುದು ಅತ್ಯುತ್ತಮ ಸತ್ಕರ್ಮಗಳಲ್ಲಿ ಒಂದಾಗಿದ್ದು ಇದು ಪ್ರವಾದಿಗಳ ಪ್ರಮುಖ ಗುಣಗಳಲ್ಲಿ ಒಂದಾಗಿದೆ ಎಂದು ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶರೀಫ್ ದಾರಿಮಿ ಹೇಳಿದರು.
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಅಡ್ಡೂರು ಶಾಖಾ ವತಿಯಿಂದ ಸೋಮವಾರ ಅಡ್ಡೂರು ಮಸೀದಿ ಮುಂಭಾಗದ ಮೈದಾನದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಮೂಹಿಕ ವಿವಾಹದಂತಹ ಬಡವರ ಕಣ್ಣೀರೊರೆಸುವ ಸತ್ಕರ್ಮಗಳಿಗೆ ಬೇಕಾಗಿ ನೆರವಾಗುವುದೂ ಕೂಡಾ ಅತ್ಯಂತ ದೊಡ್ಡ ಮಟ್ಟದ ಸತ್ಕರ್ಮವಾಗಿದೆ. ವ್ಯಕ್ತಿಯೋರ್ವ ತನ್ನ ಸಹೋದರನ ಕಷ್ಟದಲ್ಲಿ ಸ್ಪಂದಿಸಿ ಸಹಕಾರ ನೀಡುತ್ತಿರುವಾಗ ದೇವನು ಆತನ ಸಹಾಯಕ್ಕೆ ನಿಲ್ಲುತ್ತಾನೆ ಎಂದರು.
ನಿಕಾಹ್ ನೆರವೇರಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದ ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೋಸಿ ತಂಙಳ್ ಕಿಲ್ಲೂರು ಮಾತನಾಡಿ ಸತ್ಕರ್ಮಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲೂ ಟೀಕೆ-ಟಿಪ್ಪಣಿಗಳಂತಹ ಅಡ್ಡಿ-ಆತಂಕಗಳೂ ಸಹಜವಾಗಿಯೇ ಎದುರಾಗುವುದು. ಇಂತಹ ಸನ್ನಿವೇಶಗಳಿಗೆ ಎದೆಯೊಡ್ಡಿ ಸದುದ್ದೇಶಪೂರ್ವಕವಾಗಿ ಸತ್ಕರ್ಮಗಳನ್ನು ಮುಂದುವರಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕೇ ಹೊರತು ಸತ್ಕರ್ಮಗಳಿಂದ ಹಿಂದೇಟು ಹಾಕಬಾರದು ಎಂದರಲ್ಲದೆ ನಶ್ವರವಾದ ಲೌಕಿಕ ಜೀವನದಲ್ಲಿ ಮನುಷ್ಯ ಆಡಂಬರದ ಜೀವನ ನಡೆಸಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದೇ ವೇಳೆ ಸಂಕಷ್ಟ ದಲ್ಲಿರುವವರಿಗೆ ನೆರಳಾಗಿ ಜೀವಿಸಿದರೆ ಬದುಕು ಧನ್ಯಗೊಳ್ಳಲು ಸಾಧ್ಯ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಸಂವಿಧಾನವೇ ಅಪಾಯದಲ್ಲಿರುವ ಸಂದರ್ಭ ಇಂದು ಭಾರತೀಯರಿಗೆ ಎದುರಾಗಿದ್ದು, ಇಂತಹ ಸನ್ನಿವೇಶದಲ್ಲಿ ದೇಶದ ಜಾತ್ಯಾತೀತತೆ, ಸಾರ್ವಭೌಮತೆ, ಮತ ಸಹಿಷ್ಣುತೆ ಎಲ್ಲೆಡೆ ಪ್ರತಿಧ್ವನಿಗೊಳ್ಳಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದ ಅವರು ಸಾಮೂಹಿಕ ವಿವಾಹದಂತಹ ಬಡವರ ಕಣ್ಣೀರೊರೆಸುವ ಕಾರ್ಯಕ್ರಮಗಳು ಸಂಪತ್ತಿನ ಕ್ರೋಢೀಕರಣದಿಂದ ಉಂಟಾಗಿರುವ ಸಾಮಾಜಿಕ ಅಸಮಾನತೆ ತೊಲಗಿಸಲು ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಬಾವಾ ಮಾತನಾಡಿ ಮುಸ್ಲಿಂ ಧಾರ್ಮಿಕ ನಿಯಮಗಳಿಗೆ ಚ್ಯುತಿ ಬರುವ ಸನ್ನಿವೇಶ ಒದಗಿ ಬಂದರೆ ಖಂಡಿತ ವಾಗಿಯೂ ಸಹಿಸಲು ಅಸಾಧ್ಯವಾಗಿದ್ದು, ಇಂತಹ ಸನ್ನಿವೇಶಗಳನ್ನು ಎದರಿಸಲು ಸಮುದಾಯದ ಉಲಮಾ-ಉಮರಾಗಳು ವೈಯುಕ್ತಿಕ ಭಿನ್ನಾಭಿಪ್ರಾಯ ಗಳನ್ನು ಬದಿಗಿಟ್ಟು ಒಮ್ಮತದಿಂದ ಒಟ್ಟು ಸೇರಬೇಕಾದ ಅನಿವಾರ್ಯತೆ ಬಗ್ಗೆ ಹೇಳಿದರು.
ಎಸ್‍ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ, ಅಡ್ಡೂರು ಮಸೀದಿ ಅಧ್ಯಕ್ಷ ಟಿ. ಸಯ್ಯದ್, ಗೌರವಾದ್ಯಕ್ಷ ಹಾಜಿ ಬಾವುಂಞ ಸಾಗರ್, ಉಪಾಧ್ಯಕ್ಷ ಅಹ್ಮದ್ ಬಾವ, ಮಾಜಿ ಅಧ್ಯಕ್ಷ ಹಾಜಿ ಇಸ್ಮಾಯಿಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಮಲ್ಲೂರು ಅಲ್-ಅಸಾಸ್ ಚೆಯರ್‍ಮೆನ್ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ತೋಡಾರು ಸಂಶುಲ್ ಉಲಮಾ ಅರೇಬಿಕ್ ಕಾಲೇಜು ಉಪಾಧ್ಯಕ್ಷ ಎಂ.ಎಚ್. ಮಯ್ಯದ್ದಿ ಹಾಜಿ ಉದ್ಯಮಿ ಎ.ಕೆ.ಹಾರಿಸ್ ಅಡ್ಡೂರು, ಕಾಂಜಿಲಕೋಡಿ ಜೆ.ಎಂ.ಅದ್ಯಕ್ಷ ಅಹ್ಮದ್ ಬಾವ, ಬಶೀರ್ ಮದನಿ ಕೂಳೂರು, ಇಸ್ಮಾಯಿಲ್ ಸಅದಿ ಮಾಚಾರ್, ಬದ್ರುದ್ದೀನ್ ಅಝ್ಅರಿ ಮೊದಲಾದವರು ಭಾಗವಹಿಸಿದ್ದರು.
ಮುಹಮ್ಮದ್ ಸಖಾಫಿ ಅಡ್ಡೂರು ಸ್ವಾಗತಿಸಿ, ಮಜ್ಲಿಸ್ ಗಾಣೆಮಾರ್ ಮುದರ್ರಿಸ್ ಇಸ್ಮಾಯಿಲ್ ಸಅದಿ ಮಾಚಾರ್ ಪ್ರಸ್ತಾವನೆಗೈದರು ಹಾರಿಸ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ನಿರೂಪಿಸಿದರು.
ಅದೇ ದಿನ ರಾತ್ರಿ ನಡೆದ ಸುನ್ನಿ ಮಹಾಸಂಗಮ ಕಾರ್ಯಕ್ರಮದಲ್ಲಿ ಶೈಖುನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಪಿ ಮುಖ್ಯ ಬಾಷಣಗೈದರು.