ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಶೀಘ್ರ ಹಣಕಾಸು ನೆರವು: ಡಿ.ಕೆ.ಶಿವಕುಮಾರ್ ಭರವಸೆ

ಬೆಳಗಾವಿ, ಡಿ.13: ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಯಾದಗಿರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ ಒದಗಿಸಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಹಾವೇರಿ ಮತ್ತು ಗದಗ ಜಿಲ್ಲೆಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದಾಗ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿತ್ತು. ಎಚ್.ಕೆ.ಪಾಟೀಲ್ ಅವರ ಮೇಲಿನ ಪ್ರೀತಿಯಿಂದಾಗಿ ಸರಕಾರ ಗದಗ ಜಿಲ್ಲೆಗೆ 100 ಕೋಟಿ ನೀಡಿದೆ. ಹಾವೇರಿಗೆ ಹಣಕಾಸು ಸೌಲಭ್ಯ ಸಿಕ್ಕಿಲ್ಲ. 53 ಎಕರೆ ಜಾಗ ಲಭ್ಯವಿದೆ. ಬೇಗ ಹಣ ಬಿಡುಗಡೆ ಮಾಡಿ ಮೆಡಿಕಲ್ ಕಾಲೇಜು ಆರಂಭಿಸಿ ಎಂದರು.
ಕಲಬುರ್ಗಿ ನಗರದಲ್ಲಿ ಸ್ಥಾಪಿಸಲಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರು ಹೇಳಿದಾಗ ಉತ್ತರ ನೀಡಿದ ಸಚಿವರು, ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ 38 ಬೆಡ್‍ಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಹೊಸದಾಗಿ 5 ಎಕರೆ ಜಾಗ ಪಡೆದು 150 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಅದಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಮಧ್ಯಪ್ರವೇಶಿಸಿದ ಸ್ಪೀಕರ್, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಎಸ್‍ಐ ಆಸ್ಪತ್ರೆಯನ್ನು ದೊಡ್ಡದಾಗಿ ಕಟ್ಟಿಸಿದ್ದಾರೆ. ಅದರ ನಿರ್ವಹಣೆಯನ್ನು ರಾಜ್ಯ ಸರಕಾರ ವಹಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಅದಕ್ಕೆ ಉತ್ತರ ನೀಡಿದ ಸಚಿವರು, ಇಎಸ್‍ಐ ಆಸ್ಪತ್ರೆ ಇರುವುದು ಐತಿಹಾಸಿಕ ಕಟ್ಟಡ. ಅದನ್ನು ರಾಜ್ಯ ಸರಕಾರವೇ ವಹಿಸಿಕೊಳ್ಳಲಿ ಎಂದು ಕೇಂದ್ರ ಸರಕಾರ ಹೇಳಿತ್ತು. ಆಸ್ಪತ್ರೆ ನಿರ್ವಹಣೆ ದುಬಾರಿಯಾದ್ದರಿಂದ ಎಲ್ಲವೂ ಮಾತುಕತೆಯಲ್ಲಿದೆ. ರಾಜ್ಯ ಸರಕಾರ ಸಭಾಧ್ಯಕ್ಷರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತದೆ ಎಂದರು.







