ಅಶಕ್ತರೆಂದು ಸೋಗು ಹಾಕುವ ಯೋಧರ ವಿರುದ್ಧ ಕ್ರಮ: ಜನರಲ್ ರಾವತ್
ಪುಣೆ, ಡಿ.13: ಸೇನಾ ಕರ್ತವ್ಯದ ಒತ್ತಡವನ್ನು ನಿಭಾಯಿಸಲಾಗದೆ ಅಶಕ್ತತೆಯ ಸೋಗು ಹಾಕುವ ಯೋಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭೂಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಕಾರಣ ನೀಡಿ ಕೆಲವು ಯೋಧರು ಕರ್ತವ್ಯ ನಿರ್ವಹಣೆಯನ್ನು ತಪ್ಪಿಸಲು ಮತ್ತು ಹೆಚ್ಚುವರಿ ಹಣ ಸಂಪಾದಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ರಾವತ್ ಹೇಳಿದ್ದಾರೆ. ಕರ್ತವ್ಯ ನಿರ್ವಹಣೆಯ ಸಂದರ್ಭ ಅಂಗವೈಕಲ್ಯಕ್ಕೆ ಗುರಿಯಾದ ಯೋಧರು ಹಾಗೂ ಸೇನಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಂಗವಿಕಲ ಯೋಧರಿಗೆ ಸೇನೆಯು ಸಾಧ್ಯವಿರುವ ಎಲ್ಲಾ ನೆರವನ್ನೂ ಒದಗಿಸಲಿದೆ. ಆದರೆ ಅಶಕ್ತರೆಂದು ನಟಿಸುವ ಯೋಧರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಕೊನೆ ಉಸಿರಿನವರೆಗೂ ಹೋರಾಡುವ ಅಧಿಕಾರಿಗಳನ್ನು ನೋಡಿಯಾದರೂ ಕಲಿತುಕೊಳ್ಳಿ ಎಂದು ರಾವತ್ ಹೇಳಿದರು. ದೇಶದಲ್ಲಿರುವ ಅಂಗವೈಕಲ್ಯ ಹೊಂದಿರುವ ಯೋಧರ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾವತ್ ತಿಳಿಸಿದರು. ಬಳಿಕ ಅಂಗವೈಕಲ್ಯಕ್ಕೆ ಒಳಗಾದ ಯೋಧರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.