8 ವರ್ಷದ ದಲಿತ ಬಾಲಕಿಯ ಅತ್ಯಾಚಾರಗೈದು ಕೊಲೆ
ಜೈಪುರ, ಡಿ.13: ಎಂಟು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ರಾಜಸ್ತಾನದ ಝಲಾವರ್‌ನ ಪಗರಿಯಾ ಎಂಬಲ್ಲಿ ಬುಧವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಪಗರಿಯಾ ಪ್ರಾಂತ್ಯದ ನೊಲಾಯ್ ಗ್ರಾಮದಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು. ಮಂಗಳವಾರ ಶಾಲೆಯಿಂದ ಮನೆಗೆ ಮರಳಿದ ಬಾಲಕಿ ಗ್ರಾಮದ ಇತರ ಮಕ್ಕಳ ಜೊತೆ ಜಾನುವಾರು ಮೇಯಿಸಲೆಂದು ಮನೆಯಿಂದ ಹೊರ ಹೋದವಳು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಮಗಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ಪೋಷಕರು ಮಂಗಳವಾರ ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದರು.
ಬುಧವಾರ ಮನೆಯಿಂದ ಸುಮಾರು 300 ಮೀಟರ್ ದೂರದ ಭತ್ತದ ಗದ್ದೆಯಲ್ಲಿ ಬಾಲಕಿಯ ಶವ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಬಾಲಕಿಯ ಮೃತದೇಹದ ಬಳಿ ದೊಣ್ಣೆ ಹಾಗೂ ಒಂದು ಜೊತೆ ಚಪ್ಪಲಿ ಕಂಡುಬಂದಿದೆ ಎಂದು ಪಗರಿಯಾ ಪೊಲೀಸ್ ಠಾಣೆಯ ಅಧಿಕಾರಿ ರಾಧಾಕೃಷ್ಣನ್ ತಿಳಿಸಿದ್ದಾರೆ.
ಬಾಲಕಿಯ ಎದೆಯ ಭಾಗದಲ್ಲಿ ಪರಚಿದ ಗುರುತು ಕಂಡು ಬಂದಿದೆ. ಪೊಲೀಸರು ಮತ್ತು ಗ್ರಾಮಸ್ಥರು ಘಟನೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಸಂದರ್ಭ ಅಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮನೆಗೆ ಹೋಗಿ ವಿದ್ಯುತ್ ಹರಿಯುತ್ತಿದ್ದ ತಂತಿಯನ್ನು ಕೈಯಲ್ಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆತನೇ ಬಾಲಕಿಯನ್ನು ಹತ್ಯೆ ಮಾಡಿದ್ದು ಎಂದು ಪೋಷಕರು ಆರೋಪಿಸಿದ್ದು ಆತ ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.