ಮಹಾಮೈತ್ರಿಕೂಟ ಸೇರ್ಪಡೆಯ ಸೂಚನೆ ನೀಡಿದ ಉಪೇಂದ್ರ ಕುಶ್ವಾಹ

ಪುಣೆ, ಡಿ.13: ಸೋಮವಾರ ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ರಾಷ್ಟ್ರೀಯ ಲೋಕಸಮತಾ ಪಕ್ಷ(ಆರ್‌ಎಲ್‌ಎಸ್‌ಪಿ)ದ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಬುಧವಾರ ಪುಣೆಗೆ ಆಗಮಿಸಿ ಎನ್‌ಸಿಪಿ ಹಿರಿಯ ಮುಖಂಡ ಛಗನ್ ಭುಜಬಲ್ ಜೊತೆ ಮಾತುಕತೆ ನಡೆಸಿದ್ದು, ಬಿಜೆಪಿ ವಿರುದ್ಧದ ಮಹಾಘಟಬಂಧನ್(ಮಹಾಮೈತ್ರಿಕೂಟ)ಗೆ ಸೇರುವ ಸೂಚನೆ ನೀಡಿದ್ದಾರೆ.
ತನ್ನೆದುರು ಮೂರು ಆಯ್ಕೆಗಳಿವೆ . ಸ್ವಂತ ಬಲದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು, ಎರಡನೆಯದು ಮಹಾಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದು, ಮೂರನೆಯದು ತೃತೀಯ ರಂಗದ ಭಾಗವಾಗಿರುವುದು ಎಂದ ಕುಶ್ವಾಹ, ಇದೀಗ ತಾನು ಎನ್‌ಡಿಎಯನ್ನು ಶತಾಯ ಗತಾಯ ಸೋಲಿಸಲು ಪ್ರಯತ್ನಿಸುತ್ತೇನೆ ಎಂದರು. ತಾನು ಮತ್ತು ಭುಜಬಲ್ ಆತ್ಮೀಯ ಒಡನಾಡಿಗಳಾಗಿದ್ದು ಬುಧವಾರ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎನ್‌ಸಿಪಿ ಮುಖಂಡ ಶರದ್ ಪವಾರ್‌ಗೆ ಅಭಿನಂದನೆ ಸಲ್ಲಿಸಲು ಪುಣೆಗೆ ಆಗಮಿಸಿರುವುದಾಗಿ ಅವರು ತಿಳಿಸಿದರು.
ಪವಾರ್ ದೇಶದಲ್ಲಿ ಈಗಿರುವ ರಾಜಕಾರಣಿಗಳಲ್ಲಿ ಅತ್ಯಂತ ಹಿರಿಯರಾಗಿದ್ದು, ಅವರು ದೇಶಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ತನ್ನ ಕಷ್ಟದ ದಿನದಲ್ಲಿ ಅವರು ನೆರವಾಗಿದ್ದರು ಎಂದು ಕುಶ್ವಾಹ ಶ್ಲಾಘಿಸಿದರು. ಎನ್‌ಸಿಪಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದ ಭಾಗವಾಗಿದೆ. ಎನ್‌ಡಿಎ ಮೈತ್ರಿ ಮುರಿದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ವರ ಅಭಿವೃದ್ಧಿ ಎಂಬುದು ಎನ್‌ಡಿಎ ಕಾರ್ಯಸೂಚಿಯಾಗಿದೆ ಎಂದು ಭಾವಿಸಿ ನಾನು ಕೈಜೋಡಿಸಿದ್ದೆ. ಆದರೆ ಬಿಜೆಪಿ ಕೇವಲ ತನ್ನ ಅಭಿವೃದ್ಧಿಯ ಕುರಿತು ಮಾತ್ರ ಆಸಕ್ತಿ ಹೊಂದಿರುವುದರಿಂದ ಹೊರಬಂದೆ ಎಂದರು.