ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಪಕ್ಷದ ವಿಭಾಗ ವಿಸರ್ಜಿಸಿದ ಅಕಾಲಿ ದಳ

ಚಂಡಿಗಡ,ಡಿ.13: 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಎನ್‌ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷದ ವಿಭಾಗವನ್ನು ಸದ್ಯಕ್ಕೆ ಮುಚ್ಚಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಕಾಲಿ ದಳ ಅಧ್ಯಕ್ಷ ಸಖ್ಬೀರ್ ಸಿಂಗ್ ಬಾದಲ್ ಗುರುವಾರದಂದು ಮೂರು ರಾಜ್ಯಗಳಲ್ಲಿರುವ ಪಕ್ಷದ ವಿಭಾಗವನ್ನು ವಿಸರ್ಜಿಸಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಪಕ್ಷದ ವೀಕ್ಷಕರಾದ ಬಲ್ವಿಂದರ್ ಸಿಂಗ್ ಬುಂದರ್, ಪ್ರೊ. ಪ್ರೇಮ್ ಸಿಂಗ್ ಚಂದುಮಜ್ರ ಮತ್ತು ಸಿಕಂದರ್ ಸಿಂಗ್ ಮಲುಕ ಅದರ ಸಲಹೆಯ ಮೇರೆಗೆ ಪಕ್ಷದ ವಿಭಾಗಗಳನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಬಾದಲ್ ತಿಳಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟು ಪಕ್ಷವನ್ನು ಸಂಘಟನಾತ್ಮಕವಾಗಿ ಪುನರ್‌ರಚಿಸುವ ಕಾರ್ಯವು ಭರದಿಂದ ಸಾಗಿದೆ ಎಂದು ಅಕಾಲಿ ದಳದ ಉಪಾಧ್ಯಕ್ಷ ಮತ್ತು ವಕ್ತಾರ ಡಾ. ದಲ್ಜೀತ್ ಸಿಂಗ್ ಚೀಮಾ ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿದ ನಂತರ ನೂತನ ಸಂಘಟನಾ ರಚನೆಯನ್ನು ಮುಂದಿನ ಎರಡು ತಿಂಗಳಲ್ಲಿ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.





