ಕೆಲವು ವಿಷಯಗಳಲ್ಲಿ ಕೇಂದ್ರ- ಆರ್‌ಬಿಐ ಮಧ್ಯೆ ಭಿನ್ನಾಭಿಪ್ರಾಯ: ಒಪ್ಪಿಕೊಂಡ ಕೇಂದ್ರ ಸಚಿವ ಜೇಟ್ಲಿ

ಮುಂಬೈ, ಡಿ.13: ಕೇಂದ್ರ ಸರಕಾರ ಹಾಗೂ ಆರ್‌ಬಿಐ ಮಧ್ಯೆ ಎರಡು - ಮೂರು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು ಎಂದು ಒಪ್ಪಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಆದರೆ ಆರ್‌ಬಿಐ ಕಾರ್ಯನಿರ್ವಹಣೆಯ ಕುರಿತ ಚರ್ಚೆಯನ್ನೇ ಸಂಸ್ಥೆಯೊಂದರ ವಿನಾಶ ಎಂದು ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದಕ್ಕಾಗಿ ರಾಜಕೀಯ ಕ್ಷೇತ್ರದಿಂದ ತೀವ್ರ ಟೀಕೆಗೆ ಒಳಗಾದ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವ ಜೇಟ್ಲಿ, ಈ ಹಿಂದೆ ಕಾಂಗ್ರೆಸ್ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಕೂಡಾ ಆರ್‌ಬಿಐ ಗವರ್ನರ್‌ಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ಹೇಳಿದರು.
‘ಟೈಮ್ಸ್ ನೆಟ್‌ವರ್ಕ್’ ಆಯೋಜಿಸಿದ್ದ ಭಾರತ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಅರ್ಥವ್ಯವಸ್ಥೆಗೆ ಸಾಲದ ಹರಿವು ಮತ್ತು ನಗದು ಬೆಂಬಲದ ವಿಷಯ ಸೇರಿದಂತೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಆದರೆ ತನ್ನ ಆತಂಕವನ್ನು ಹೊರಗೆಡವಲು ಸರಕಾರ ಮಾತುಕತೆಗೆ ಉಪಕ್ರಮ ಆರಂಭಿಸಿತ್ತು ಎಂದರು. ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿರುವ ಆರ್‌ಬಿಐ ಅರ್ಥವ್ಯವಸ್ಥೆಯ ಈ ಪ್ರಮುಖ ಅಂಶದತ್ತ (ಸಾಲದ ಹರಿವು ಮತ್ತು ನಗದು ಬೆಂಬಲ) ಗಮನ ಹರಿಸಬೇಕೆಂದು ಸರಕಾರದ ಅಭಿಪ್ರಾಯವಾಗಿತ್ತು ಮತ್ತು ಈ ಕುರಿತು ಮಾತುಕತೆಗೆ ಸರಕಾರ ನಿರ್ಧರಿಸಿತ್ತು. ಆದರೆ ಇದು ಸಂಸ್ಥೆಯೊಂದರ ವಿನಾಶ ಹೇಗಾಗುತ್ತದೆ ಎಂದವರು ಪ್ರಶ್ನಿಸಿದರು. ಕೆಲವೊಮ್ಮೆ ವ್ಯವಸ್ಥೆಯಲ್ಲಿ ಉಂಟಾಗುವ ಸಮಸ್ಯೆಯ ಬಗ್ಗೆ ಸ್ವಾಯತ್ತ ಸಂಸ್ಥೆಗಳಿಗೂ ತಿಳಿಸಿ ಹೇಳುವ ಅಗತ್ಯವಿದೆ ಎಂದು ಜೇಟ್ಲಿ ಹೇಳಿದರು.