ಉಡುಪಿ: 258 ಕೋಟಿ ರೂ. ಬೆಳೆಸಾಲ ಮನ್ನಾ ಪ್ರಕ್ರಿಯೆ ಆರಂಭ
ಕಾರ್ಕಳ ತಾಲೂಕಿನ 15 ರೈತರ ಸಾಲ ಮನ್ನಾ

ಉಡುಪಿ, ಡಿ.13: ಜಿಲ್ಲೆಯ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದಿರುವ 258 ಕೋಟಿ ರೂ.ಗಳ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈಗಾಗಲೇ ಕಾರ್ಕಳ ತಾಲೂಕಿನ ಮೂರು ಸಹಕಾರ ಸಂಘಗಳ ಒಟ್ಟು 15 ರೈತರು ಇದರ ಪ್ರಯೋಜವನ್ನು ಪಡೆದುಕೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಡಿಸಿಸಿ ಹಾಗೂ ಸಹಕಾರಿ ಸಂಘಗಳಲ್ಲಿ ಒಂದು ಲಕ್ಷ ರೂ. ವರೆಗಿನ ಸಾಲಮನ್ನಾಕ್ಕೆ ಆರಂಭಿಕ ಪ್ರಕ್ರಿಯೆಗಳು ಈಗಾಗಲೇ ಮುಗಿದಿದ್ದು, ರೈತರಿಗೆ ಇದರ ಪ್ರಯೋಜನ ಶೀಘ್ರವೇ ಸಿಗಲಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಎರಡು ಲಕ್ಷ ರೂ.ವರೆಗಿನ ಸಾಲಮನ್ನಾಕ್ಕೆ ರೈತರು ತಮ್ಮ ಹೆಸರುಗಳನ್ನು ನೊಂದಾಯಿಸಲು ಡಿ.13ರಿಂದ 2019ರ ಜ.10 ರವರೆಗೆ ಕಾಲಾವಕಾಶವಿದೆ. ರೈತರು ತಾವು ಸಾಲ ಪಡೆದ ಬ್ಯಾಂಕ್ ಶಾಖೆಗಳಿಗೆ ಕಚೇರಿ ವೇಳೆಯಲ್ಲಿ ಬಂದು ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ವಿದ್ಯಾಕುಮಾರಿ ವಿವರಿಸಿದರು.
ಜಿಲ್ಲೆಯಲ್ಲಿ 2009ರ ಎ.1 ಹಾಗೂ ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು, 2017ರ ಡಿ.31ರವರೆಗೆ ಬಾಕಿ ಇರುವ ರೈತರ ಬೆಳೆಸಾಲಗಳಿಗೆ ಈ ಪ್ರಯೋಜನ ದೊರೆಯಲಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಒಂದು ಲಕ್ಷ ರೂ. ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ 2 ಲಕ್ಷ ರೂ.ವರೆಗಿನ ಸಾಲಗಳು ಈ ಬೆಳೆ ಸಾಲ ಮನ್ನಾ ಯೋಜನೆಗೆ ಒಳಪಡಲಿವೆ. ಈಗಾಗಲೇ ಸಾಲ ಮರುಪಾವತಿ ಮಾಡಿರುವ ರೈತರ ಉಳಿತಾಯ ಖಾತೆಗಳಿಗೆ ಯೋಜನೆ ಹಣ ಜಮೆ ಆಗಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ 24,232 ಮಂದಿ ರೈತರು ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕ್‌ಗಳಲ್ಲಿ ಕೃಷಿಸಾಲ ಪಡೆದಿದ್ದು, 4,648 ಮಂದಿ ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಜಿಲ್ಲೆಯ ರೈತರಿಗೆ ಒಟ್ಟು 258 ಕೋಟಿ ರೂ. ಗಳ ಸಾಲ ಮನ್ನಾ ಯೋಜನೆಯ ನೆರವು ದೊರೆಯಲಿದೆ ಎಂದವರು ಹೇಳಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿ ಈಗಾಗಲೇ ಬೆಳೆ ಸಾಲ ಮನ್ನಾ ಯೋಜನೆಗೆ ಬಹುತೇಕ ರೈತರ ನೊಂದಾವಣೆ ಮುಗಿದಿದ್ದು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ನೊಂದಣಿ ಇಂದು ಪ್ರಾರಂಭಗೊಂಡಿದೆ. ಸಾಲ ಮನ್ನಾ ಕುರಿತಂತೆ ನೊಂದಾಯಿಸಲು ಸಾಕಷ್ಟು ಕಾಲಾವಕಾಶವಿದ್ದು, ಪ್ರತಿ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ನ ನಕಲು ಪ್ರತಿ ಹಾಗೂ ಸಾಲ ಪಡೆದ ಸರ್ವೆ ನಂಬರಿನ ಮಾಹಿತಿಯನ್ನು ಸ್ವಯಂ ದೃಢೀಕರಿಸಿ, ತಾವು ಸಾಲ ಪಡೆದ ಬ್ಯಾಂಕ್ ಗಳಿಗೆ ಸಲ್ಲಿಸಬೇಕು ಎಂದವರು ವಿವರಿಸಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿ ಬೆಳೆಸಾಲ ಮನ್ನಾ ಪಡೆದ ಫಲಾನುಭವಿಗಳು, ವಾಣಿಜ್ಯ ಬ್ಯಾಂಕ್‌ನಲ್ಲೂ ಬೆಳೆ ಸಾಲ ಮನ್ನಾ ಯೋಜನೆಯಡಿ ಈ ಪ್ರಯೋಜನ ಪಡೆಯಲು ಅವಕಾಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಸಹಕಾರಿ ಸಂಘಗಳಲ್ಲಿ ಬೆಳೆಸಾಲದವರ ಸಾಲಮನ್ನಾ ನಡೆಯುತಿದ್ದು, ಈಗಾಗಲೇ ಕಾರ್ಕಳ ತಾಲೂಕಿನ ನೀರೆ, ಮುಂಡ್ಕೂರು ಹಾಗೂ ಬೆಳ್ಮಣ್ಣು ಸಂಘಗಳಿಂದ ಸಾಲ ಪಡೆದ 15 ಮಂದಿ ರೈತರ ಸಾಲಮನ್ನಾ ಆಗಿದೆ ಎಂದರು.
ಪ್ರತಿದಿನ ಒಂದು ಬ್ಯಾಂಕ್ ಶಾಖೆಯಲ್ಲಿ ಕನಿಷ್ಠ 40 ರೈತರ ಹೆಸರುಗಳನ್ನು ನೊಂದಾಯಿಸಲು ಅವಕಾಶವಿದೆ. ನಂತರದ ರೈತರಿಗೆ ಕ್ರಮಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್ ನೀಡಲಾಗುತ್ತದೆ. ಆ ದಿನದಂದು ರೈತರು ಬ್ಯಾಂಕಿಗೆ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಹಾಗೂ ಪಡಿತರ ಚೀಟಿ ನಕಲಿನೊಂದಿಗೆ ತೆರಳಿ ಹೆಸರು ನೊಂದಾಯಿಸಬಹುದು.
ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್‌ನ್ನು ನೀಡಲಾಗಿದೆ. ರೈತರಿಗೆ ಯಾವುದೇ ವಿಷಯದಲ್ಲಿ ಗೊಂದಲ ಅಥವಾ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ನಂ: 0820-257480ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರುದ್ರೇಶ್ ಡಿ.ಸಿ., ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್ಉ ಪಸ್ಥಿತರಿದ್ದರು.