ಶಬರಿಮಲೆ ವಿವಾದ: ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ತಿರುವನಂತಪುರಂ,ಡಿ.13: ರಾಜ್ಯ ಸರಕಾರ ಶಬರಿಮಲೆ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ವೇಣುಗೋಪಾಲ್ ನಾಯರ್ ಎಂಬ 49ರ ಹರೆಯದ ವ್ಯಕ್ತಿ ತನ್ನ ದೇಹಕ್ಕೆ ಬೆಂಕಿ ಹಚ್ಚಿ ಬಿಜೆಪಿ ನಾಯಕ ಸಿ.ಕೆ ಪದ್ಮನಾಭನ್ ಧರಣಿ ಕುಳಿತಿದ್ದ ಸ್ಥಳದತ್ತ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಮುಟ್ಟಡದ ನಿವಾಸಿಯಾಗಿರುವ ನಾಯರ್ ಅನ್ನು ಶೇ.60 ಸುಟ್ಟ ಗಾಯಗಳೊಂದಿಗೆ ತಿರುವನಂತಪುರಂನ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಣುಗೋಪಾಲ್ ನಾಯರ್ ಓರ್ವ ಅಯ್ಯಪ್ಪ ಭಕ್ತರಾಗಿದ್ದರು. ಬೆಂಕಿ ಅವರನ್ನು ಸುಡುವಾಗಲೂ ಅವರು ಸ್ವಾಮಿ ಶರಣಂ ಎಂದು ಜಪಿಸುತ್ತಿದ್ದರು ಎಂದು ಪದ್ಮನಾಭನ್ ತಿಳಿಸಿದ್ದಾರೆ.
ನಾಯರ್ ಮದ್ಯ ಸೇವಿಸಿದ್ದರು ಮತ್ತು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು ಅವರ ಆತ್ಮಹತ್ಯೆ ಯತ್ನ ಪ್ರಕರಣವನ್ನು ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಸೆಪ್ಟಂಬರ್ 28ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ.