ರಾಮನ ಜತೆ ಸೀತೆಗೂ ಗೌರವ ಸಲ್ಲಿಸಿ: ಮುಖ್ಯಮಂತ್ರಿ ಆದಿತ್ಯನಾಥ್ಗೆ ಕರಣ್ ಸಿಂಗ್ ಸಲಹೆ
ಲಕ್ನೋ, ಡಿ. 14: ಉತ್ತರ ಪ್ರದೇಶದ ಸರಯೂ ನದಿ ತೀರದಲ್ಲಿ ರಾಮನ 221 ಮೀಟರ್ ಎತ್ತರದ ಬೃಹತ್ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ಗೆ ಕಾಂಗ್ರೆಸ್ ಟಾಂಗ್ ನೀಡಿದ್ದು, ರಾಮನ ಪ್ರತಿಮೆ ಜತೆಗೆ ಸೀತೆಯ ಪ್ರತಿಮೆಯನ್ನೂ ಸ್ಥಾಪಿಸಿ ಆಕೆಗೆ ಧೀರ್ಘಕಾಲದಿಂದ ಸಲ್ಲಸಬೇಕಿರುವ ಗೌರವ ಸಲ್ಲಿಸಿ ಎಂದು ಹಿರಿಯ ಕಾಂಗ್ರೆಸ್ಸಿಗ ಮತ್ತು ರಾಜ್ಯಸಭಾ ಸದಸ್ಯ ಕರಣ್ ಸಿಂಗ್ ಸಲಹೆ ಮಾಡಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ ಸೀತಾರಾಮ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿರುವ 87 ವರ್ಷದ ಸಿಂಗ್, ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಈ ಸಲಹೆ ಮಾಡಿದ್ದಾರೆ. ಇದನ್ನು ಸಕಾರಾತ್ಮಕವಾಗಿ ಪರಿಗಣಿಸಿ ಆದಿತ್ಯನಾಥ್, ಅಯೋಧ್ಯೆಯಲ್ಲಿ ಸೀತೆಗೆ ಧೀರ್ಘಕಾಲದಿಂದ ಸಲ್ಲಬೇಕಾದ ಗೌರವ ಸಲ್ಲಿಸಲಾಗುವುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಹಿಂದುತ್ವದ ಬಗ್ಗೆ ಹಲವು ಕೃತಿಗಳನ್ನು ಬರೆದಿರುವ ಸಿಂಗ್, ಸೀತಾಮಾತೆ ಅನುಭವಿಸಿದ ಸಂಕಷ್ಟಗಳು ಹಾಗೂ ಅಹಿತಕರ ಘಟನೆಗಳನ್ನು ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ. "ನೀವು ರಾಮನ ಬೃಹತ್ ಪುತ್ಥಳಿ ಸ್ಥಾಪನೆಗೆ ಮುಂದಾಗಿರುವುದರಿಂದ, ಉದ್ದೇಶಿತ ರಾಮನ ಪ್ರತಿಮೆಯ ಎತ್ತರ ಅರ್ಧದಷ್ಟು ಕಡಿಮೆಗೊಳಿಸಿ, ಆ ಪ್ರತಿಮೆ ಪಕ್ಕದಲ್ಲೇ ಸೀತೆಯ ಪ್ರತಿಮೆಯನ್ನೂ ನಿರ್ಮಿಸಿ" ಎಂದು ಸಲಹೆ ಮಾಡಿದ್ದಾರೆ.
"ರಾಮನನ್ನು ವಿವಾಹವಾದ ಬಳಿಕ ಸೀತಾಮಾತೆ ರಾಮನ ಜತೆಗೆ 14 ವರ್ಷಗಳ ವನವಾಸ ಅನುಭವಿಸಿದ್ದಾಳೆ. ವನವಾಸದ ಕೊನೆಯಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಒಯ್ದಿದ್ದಾನೆ. ಜೈಲಿನಂಥ ಪ್ರದೇಶದಲ್ಲಿ ವಾಸವಿದ್ದಳು. ರಾವಣನನ್ನು ಕೊಂದು ಸೀತೆಯನ್ನು ರಾಮ ವಾಪಾಸು ಕರೆತಂದ ಬಳಿಕ ಕೂಡಾ ಅಗ್ನಿಪರೀಕ್ಷೆಗೆ ಒಳಗಾದ ಬಳಿಕವಷ್ಟೇ ರಾಮ ಆಕೆಯನ್ನು ಸ್ವೀಕರಿಸಿದ್ದಾನೆ. ಬಳಿಕ ಗರ್ಭಿಣಿಯಾಗಿದ್ದಾಗ ಕೂಡಾ ವನವಾಸ ಅನುಭವಿಸಬೇಕಾಯಿತು" ಎಂದು ಸೀತೆಯ ಸಂಕಷ್ಟಗಳ ಸರಮಾಲೆ ವಿವರಿಸಿದ್ದಾರೆ.