ಎಲ್ಲಾ ಕಾಯಿಲೆಗಳ ಅಪಾಯ ಹೆಚ್ಚಿಸುವ ‘ಬೊಜ್ಜು’ ಸಮಸ್ಸೆಗೆ ಕಾರಣಗಳೇನು?
ಬೊಜ್ಜು ಇಂದು ವಿಶ್ವಾದ್ಯಂತ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಮೂರನೇ ಒಂದರಷ್ಟು ಜನರು ಅತಿಯಾದ ತೂಕವನ್ನು ಹೊಂದಿದ್ದಾರೆ.
ಬೊಜ್ಜು ಹೆಚ್ಚುಕಡಿಮೆ ಎಲ್ಲ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಬೊಜ್ಜನ್ನುಂಟು ಮಾಡುವ ಕಾರಣಗಳು ನಿಮಗೆ ಗೊತ್ತಿದ್ದರೆ ಅದರೊಂದಿಗೆ ಗುರುತಿಸಿಕೊಂಡಿರುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ನಿಮಗೆ ಸಾಧ್ಯವಾಗುತ್ತದೆ. ಕುಟುಂಬದ ಇತಿಹಾಸ,ಆನುವಂಶಿಕತೆ ಮತ್ತು ಜೀವನಶೈಲಿ ಸೇರಿದಂತೆ ಬೊಜ್ಜನ್ನುಂಟು ಮಾಡುವ ಹಲವಾರು ಕಾರಣಗಳಿವೆ. ಅಂತಹ ಕೆಲವು ಕಾರಣಗಳು ಇಲ್ಲಿವೆ....
►ಆನುವಂಶಿಕತೆ
ಬೊಜ್ಜಿಗೂ ನಮ್ಮ ವಂಶವಾಹಿಗೂ ಗಾಢವಾದ ಸಂಬಂಧವಿದೆ. ಬೊಜ್ಜುತನ ಹೊಂದಿರುವ ದಂಪತಿಗಳ ಮಕ್ಕಳು ಇತರ ಮಕ್ಕಳಿಗೆ ಹೋಲಿಸಿದರೆ ಬೊಜ್ಜು ಬೆಳೆಸಿಕೊಳ್ಳುವ ಹೆಚ್ಚಿನ ಅಪಾಯವಿದೆ. ಆದರೆ ಬೊಜ್ಜಿಗೆ ವಂಶವಾಹಿಯೊಂದನ್ನೇ ದೂರುವಂತಿಲ್ಲ,ಆಹಾರಕ್ರಮ ಮತ್ತು ಜೀವನಶೈಲಿಯಂತಹ ಇತರ ಕಾರಣಗಳೂ ಇವೆ.
►ಆಹಾರ
ಆಹಾರವು ಶರೀರದ ತೂಕಏರಿಕೆ ಮತ್ತು ಬೊಜ್ಜುತನದಲ್ಲಿ ಪ್ರಮುಖ ಪಾತ್ರ ಹೊಂದಿದೆ. ಕೊಬ್ಬುಗಳು ಮತ್ತು ಸಕ್ಕರೆಯನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವ ಅತಿಯಾಗಿ ಸಂಸ್ಕರಿಸಲ್ಪಟ್ಟ ಆಹಾರಗಳು ನಮ್ಮಲ್ಲಿ ಸಂತೋಷವನ್ನುಂಟು ಮಾಡುವ ಮಿದುಳಿನಲ್ಲಿಯ ನರವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಇವು ಪ್ರಚೋದಿತವಾದಾಗ ಡೋಪ್ಮೈನ್ನಂತಹ ನ್ಯೂರೊಟ್ರಾನ್ಸ್ಮಿಟರ್ ಅಥವಾ ನರಪ್ರೇಕ್ಷಕಗಳು ಬಿಡುಗಡೆಗೊಳ್ಳುತ್ತವೆ. ಇವು ನಮಗೆ ಸಂತೋಷ ಮತ್ತು ಹಿತಾನುಭವವನ್ನು ನೀಡಿ ನಾವು ಅಂತಹ ಆಹಾರವನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ.
ಇದರಿಂದಾಗಿ ನಾವು ಜಂಕ್ ಫುಡ್ಗಳನ್ನು ತಿನ್ನಲು ಕಾತುರರಾಗುತ್ತೇವೆ ಮತ್ತು ಅಂತಿಮವಾಗಿ ಶರೀರದ ತೂಕ ಹೆಚ್ಚುತ್ತಲೇ ಹೋಗುತ್ತದೆ. ಅಲ್ಲದೆ ಈ ಆಹಾರಗಳು ಕ್ಯಾಲರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಪೌಷ್ಟಿಕಾಂಶಗಳನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಶರೀರದಲ್ಲಿ ಕೊಬ್ಬು ಸಂಗ್ರಹಗೊಳ್ಳುತ್ತದೆ ಮತ್ತು ನಾವು ಬೊಜ್ಜುದೇಹಿಗಳಾಗುತ್ತೇವೆ. ಕೆಂಪು ಮತ್ತು ಸಂಸ್ಕರಿತ ಮಾಂಸ, ಸಂಸ್ಕರಿತ ಧಾನ್ಯಗಳು, ಸಿಹಿಖಾದ್ಯಗಳು, ಸಕ್ಕರೆಯನ್ನೊಳಗೊಂಡಿರುವ ಪಾನೀಯಗಳು, ಕಾರ್ಬನೀಕೃತ ಪಾನೀಯಗಳು ಇತ್ಯಾದಿಗಳ ಸೇವನೆಯ ಮೆಲೆ ಮಿತಿಯಿರಲಿ. ತಾಜಾ ಹಣ್ಣುಗಳು,ತರಕಾರಿಗಳು,ಇಡಿಯ ಧಾನ್ಯಗಳು,ಮೀನು,ಪೌಲ್ಟ್ರಿ ಉತ್ಪನ್ನಗಳು ಮತ್ತು ಸಲಾಡ್ಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
►ಜೀವನಶೈಲಿ
ಇಂದು ತಂತ್ರಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಈ ತಂತ್ರಜ್ಞಾನ ಮತ್ತು ನಮ್ಮ ಜೀವನಶೈಲಿಗಳೇ ಬೊಜ್ಜಿಗೂ ಕಾರಣವಾಗುತ್ತವೆ ಎಂದರೆ ಅಚ್ಚರಿ ಪಡಬೇಕಿಲ್ಲ. ಕಂಪ್ಯೂಟರ್ಗಳು,ಮೊಬೈಲ್ ಫೋನ್ಗಳು ಮತ್ತು ಟಿವಿ ನಮ್ಮ ದೈಹಿಕ ಚಟುವಟಿಕೆಗಳನ್ನು ಕಡಿಮೆಗೊಳಿಸಿವೆ ಮತ್ತು ಶರೀರದ ತೂಕ ಹೆಚ್ಚುವಿಕೆಯನ್ನು ಉತ್ತೇಜಿಸುತ್ತಿವೆ. ಇದೇ ರೀತಿ ವಿಶೇಷವಾಗಿ ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿರುವ ಕುಟುಂಬಗಳು ದಿನದ ದುಡಿಮೆಯ ಬಳಿಕ ಅಡುಗೆಯನ್ನು ಮಾಡಲು ಸಮಯ ಮತ್ತು ಉತ್ಸಾಹದ ಕೊರತೆಯಿಂದಾಗಿ ಸಿದ್ಧ ಆಹಾರದ ಮೊರೆ ಹೋಗುತ್ತಿರುವುದರಿಂದ ಫಾಸ್ಟ್ ಫುಡ್ ರೆಸ್ಟೋರಂಟ್ಗಳು ದಿನೇದಿನೇ ಹೆಚ್ಚುತ್ತಿವೆ ಮತ್ತು ಇದರೊಂದಿಗೆ ಬೊಜ್ಜು ಕೂಡ!
ಉದ್ಯೋಗಕ್ಕೆ ತೆರಳುವವರು ದಿನದ ಕೆಲಸದ ಒತ್ತಡ ಮತ್ತು ಅನಿಯಮಿತ ಊಟದ ಸಮಯದಿಂದಾಗಿ ಸಿಕ್ಕಿದ್ದನ್ನು ಮುಕ್ಕುವುದರಿಂದ ಅವರಿಗೆ ತಾವು ಏನು ತಿನ್ನುತ್ತಿದ್ದೇವೆ ಎನ್ನುವುದರ ಮೇಲೆ ನಿಗಾಯಿರುವುದಿಲ್ಲ. ಹೀಗಾಗಿ ಮನೆಯಿಂದಲೇ ಊಟದ ಡಬ್ಬಿ ಒಯ್ದರೆ ಅತಿಯಾದ ಎಣ್ಣೆ,ಉಪ್ಪು,ಸಕ್ಕರೆ ಮತ್ತು ಮಸಾಲೆಗಳ ಸೇವನೆಯನ್ನು ನಿಯಂತ್ರಿಸಬಹುದು ಮತ್ತು ಇದರಿಂದ ಆರೋಗ್ಯಕರ ಆಹಾರ ಸೇವಿಸುವಂತಾಗುತ್ತದೆ. ಅಲ್ಲದೆ ಸಾಧ್ಯವಿದ್ದ ಸಂದರ್ಭಗಳಲ್ಲಿ ವಾಹನವನ್ನು ಬಳಸದೆ ನಡೆದುಕೊಂಡೇ ಹೋಗುವುದು ಬೊಜ್ಜಿನ ಅಪಾಯವನ್ನು ತಗ್ಗಿಸಲು ನೆರವಾಗುತ್ತದೆ.
►ದೈಹಿಕ ನಿಷ್ಕ್ರಿಯತೆ
ಕ್ರಿಯಾಶೀಲ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದ ಕೊರತೆ ನಮ್ಮ ಶರೀರದ ತೂಕ ಹೆಚ್ಚುವಂತೆ ಮಾಡುತ್ತದೆ ಮತ್ತು ಅಂತಿಮವಾಗಿ ನಮ್ಮನ್ನು ಬೊಜ್ಜುದೇಹಿಗಳನ್ನಾಗಿಸುತ್ತದೆ. ದೊಡ್ಡವರು ಮಾತ್ರವಲ್ಲ, ಮಕ್ಕಳೂ ಹೆಚ್ಚಾಗಿ ಮೊಬೈಲ್ ಪೋನ್ಗಳು ಮತ್ತು ಟಿವಿ ವೀಕ್ಷಣೆಯಲ್ಲಿಯೇ ಮುಳುಗಿರುವುದು ಅವರ ದೈಹಿಕ ಕ್ರಿಯಾಶೀಲತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೊಜ್ಜಿಗೆ ಪ್ರಮುಖ ಕಾರಣವಾಗುತ್ತದೆ. ಹೀಗಾಗಿ ಮೊಬೈಲ್ ಮತ್ತು ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿ ಹೊರಗೆ ಅಡ್ಡಾಡುವುದನ್ನು ಹೆಚ್ಚಿಸಿ. ಪ್ರತಿದಿನ ವ್ಯಾಯಾಮ ಮಾಡಿ. ಇದು ಸಾಧ್ಯವಾಗದಿದ್ದರೆ ಬಿರುಸಿನ ನಡಿಗೆ,ಯೋಗ ಅಥವಾ ಧ್ಯಾನವನ್ನು ಮಾಡಿ. ಇವುಗಳನ್ನೂ ಮಾಡಲು ಆಸಕ್ತಿಯಿಲ್ಲದಿದ್ದರೆ ಶರೀರದಲ್ಲಿಯ ಹೆಚ್ಚಿನ ಕ್ಯಾಲರಿಗಳನ್ನು ಕಡಿಮೆ ಮಾಡಿಕೊಳ್ಳಲು ಡ್ಯಾನ್ಸ್ ತರಗತಿಗಳಿಗೆ ಸೇರಿಕೊಳ್ಳಿ.
►ನಿದ್ರೆ
ನಿದ್ರೆಯ ಕೊರತೆ ಅಥವಾ ಅತಿಯಾದ ನಿದ್ರೆಯೂ ಬೊಜ್ಜು ಬರಲು ಪ್ರಮುಖ ಕಾರಣವಾಗಿದೆ. ದಿನಕ್ಕೆ ಆರು ಗಂಟೆಗಿಂತ ಕಡಿಮೆ ಅಥವಾ ಎಂಟು ಗಂಟೆಗಿಂತ ಹೆಚ್ಚು ನಿದ್ರೆ ಮಾಡುವುದು ವಯಸ್ಕರಲ್ಲಿ ಶರೀರದ ತೂಕವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ದಿನಕ್ಕೆ ಹತ್ತು ಗಂಟೆಗಳಿಗಿಂತ ಹೆಚ್ಚು ನಿದ್ರಿಸುವ ಮಕ್ಕಳಲ್ಲಿ ವಯಸ್ಕರಾಗುತ್ತಿದ್ದಂತೆ ಬೊಜ್ಜಿನ ಅಪಾಯವೂ ಹೆಚ್ಚಾಗುತ್ತದೆ.
ರಾತ್ರಿ ಐದು ಗಂಟೆ ಅಥವಾ ಅದಕ್ಕೂ ಕಡಿಮೆ ಸಮಯ ನಿದ್ರಿಸುವ ಮಹಿಳೆಯರ ತೂಕ 7ರಿಂದ 8 ಗಂಟೆ ನಿದ್ರಿಸುವವರಿಗಿಂತ 15 ಕೆಜಿ ಅಥವಾ ಅದಕ್ಕೂ ಅಧಿಕ ಹೆಚ್ಚುವ ಅಪಾಯ ಶೇ.32ರಷ್ಟಿರುತ್ತದೆ ಎಂದು ಅಮೇರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ಬೆಟ್ಟುಮಾಡಿದೆ. ಹೀಗಾಗಿ ಬೊಜ್ಜಿನ ಅಪಾಯವನ್ನು ತಗ್ಗಿಸಲು ಮತ್ತು ಆರೋಗ್ಯಕರ ಬದುಕಿಗಾಗಿ ಪ್ರತಿ ನಿತ್ಯ 7ರಿಂದ 8 ಗಂಟೆಗಳ ಕಾಲ ಒಳ್ಳೆಯ ನಿದ್ರೆ ಅಗತ್ಯವಾಗಿದೆ.