ಮಂಗಳೂರು: ಅತ್ಯಾಚಾರ ಪ್ರಕರಣದ ಆರೋಪ ಸಾಬೀತು; ಶನಿವಾರ ಶಿಕ್ಷೆ ಪ್ರಕಟ ?
ಮಂಗಳೂರು, ಡಿ.14: ನಾಲ್ಕು ವರ್ಷದ ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಮೇಲಿನ ಆರೋಪ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ.
ಕಂಕನಾಡಿ ನಿವಾಸಿ ಚಂದ್ರಶೇಖರ್ ಅಲಿಯಾಸ್ ರಾಜೇಶ್ (49) ಅಪರಾಧಿ.
ಪೈಂಟಿಂಗ್ ಕೆಲಸ ಮಾಡುತ್ತಿದ್ದ ಈತನಿಗೆ ವಿವಾಹವಾಗಿ ಮಕ್ಕಳೂ ಇವೆ. ಈ ಹಿಂದೆ ಅಸೈಗೋಳಿ ಸಮೀಪದ ಗ್ರಾಮವೊಂದರಲ್ಲಿ ಈತ ವಾಸವಾಗಿದ್ದ. ಸಂತ್ರಸ್ತ ಬಾಲಕಿಯ ಮನೆಯವರು ಪಕ್ಕದ ಮನೆಯಲ್ಲಿದ್ದರು. ಬಾಲಕಿಯ ಹೆತ್ತವರು ಕಡು ಬಡವರಾಗಿದ್ದು, ಟಿವಿ ನೋಡಲು ಬಾಲಕಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದಳು.
ಅದರಂತೆ 2016 ಜುಲೈ 23ರಂದು ಬಾಲಕಿ ಟಿವಿ ನೋಡಲೆಂದು ಮನೆಗೆ ಹೋಗಿದ್ದಾಗ ಅದನ್ನೇ ದುರ್ಬಳಕೆ ಮಾಡಿಕೊಂಡ ಚಂದ್ರಶೇಖರ್, ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿಷಯ ತಿಳಿದ ಬಾಲಕಿಯ ತಾಯಿ ಕೊಣಾಜೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿತ್ತು.
ಪ್ರಕರಣದ ತನಿಖೆ ನಡೆಸಿದ ಕೊಣಾಜೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಅಶೋಕ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಬಿ.ಆರ್.ಪಲ್ಲವಿ ತೀರ್ಪು ಪ್ರಕಟಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ಸರಕಾರದ ಪರ ವಾದ ಮಂಡಿಸಿದ್ದರು.
ಅಪರಾಧಿ ಚಂದ್ರಶೇಖರ್ ಬಂಧಿತನಾಗಿ, ಬಳಿಕ ಜಾಮೀನಲ್ಲಿ ಬಿಡುಗಡೆ ಹೊಂದಿದ್ದ. ಈತನಿಗೆ 10 ವರ್ಷ ಜೈಲು ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಸಂತ್ರಸ್ತೆಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅವಕಾಶವಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 15 ಸಾಕ್ಷಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ನೊಂದ ಬಾಲಕಿ, ವೈದ್ಯಾಧಿಕಾರಿ ಸಾಕ್ಷಿ ಹಾಗೂ ಎಫ್‌ಎಸ್‌ಎಲ್ ವರದಿ ಆರೋಪ ಸಾಬೀತಾಗಲು ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಚಂದ್ರಶೇಖರ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.