ಮುಲ್ಕಿ: ಟ್ಯಾಂಕರ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಮಂಗಳೂರು, ಡಿ.14: ಮುಲ್ಕಿಯ ಜಂಕ್ಷನ್‌ನಲ್ಲಿ ಟ್ಯಾಂಕರ್‌ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮುಲ್ಕಿ ನಿವಾಸಿ ಉಷಾ ಬಳ್ಳಾಲ್ (56) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಅವರು ನಗರದ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಉಷಾ ಅವರು ಬೆಳಗ್ಗೆ ಬ್ಯಾಂಕ್‌ವೊಂದಕ್ಕೆ ಹಣ ಜಮೆ ಮಾಡಲು ಮಂಗಳೂರಿಗೆ ತೆರಳಿದ್ದರು. ಹಣ ಕಟ್ಟಿ ವಾಪಸಾಗುತ್ತಿದ್ದ ವೇಳೆ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ತೆರಳುತ್ತಿದ್ದ ಟ್ಯಾಂಕರ್‌ವೊಂದು ಮಹಿಳೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಸಹಿತ ಉಷಾ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story