ಸುಪ್ರೀಂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ ಸಿಎಜಿ ವರದಿಯೇ ಇಲ್ಲ: ರಾಹುಲ್ ಗಾಂಧಿ
ರಫೇಲ್ ವಿವಾದ
ಹೊಸದಿಲ್ಲಿ, ಡಿ.14: ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಜೆಟ್ ಗಳ ಬೆಲೆಗಳ ಬಗ್ಗೆ ಸಿಎಜಿ ಗಮನಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
“ಬೆಲೆಯ ವಿವರಗಳನ್ನು ಸಿಎಜಿಯೊಂದಿಗೆ ಹಂಚಿಕೊಳ್ಳಲಾಗಿದ್ದು, ಅದು ಪಿಎಜಿ (ಸಾರ್ವಜನಿಕ ಲೆಕ್ಕ ಸಮಿತಿ) ಬಳಿಯಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ. ಆದರೆ ಅಂತಹ ಯಾವುದೇ ವರದಿಗಳಿಲ್ಲ” ಎಂದು ಹೇಳಿದ ರಾಹುಲ್ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪಿಎಜಿಯ ಮುಖ್ಯಸ್ಥರು ಎಂದು ಹೇಳಿದರು.
ಇಂತಹ ಯಾವುದೇ ವರದಿಯನ್ನು ಪಿಎಜಿ ಸ್ವೀಕರಿಸಿಲ್ಲ. ಆ ವರದಿ ಎಲ್ಲಿಗೆ ಹೋಯಿತು?, ಅದು ಪ್ರಧಾನಿ ಮೋದಿ ಸ್ಥಾಪಿಸಿದ ಬೇರೊಂದು ಸಾರ್ವಜನಿಕ ಲೆಕ್ಕ ಸಮಿತಿಯೊಂದಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದ ರಾಹುಲ್, “ಜಂಟಿ ಸಂಸದೀಯ ಸಮಿತಿ ಈ ತನಿಖೆ ನಡೆಸಿದರೆ ಪ್ರಧಾನಿ ಮೋದಿ ಮತ್ತು ಅನಿಲ್ ಅಂಬಾನಿಯ ಹೆಸರು ಹೊರಬರಲಿದೆ” ಎಂದು ಹೇಳಿದ್ದಾರೆ.